ಏರ್ ಇಂಡಿಯಾ ವಿಮಾನದಲ್ಲಿ ಮದುವೆಗಾಗಿ ಮಂಗಳೂರಿಗೆ ಆಗಮಿಸಿದ್ದ ಗಲ್ಫ್ ನ್ಯೂಸ್ ಉದ್ಯೋಗಿ ಹಾಗೂ ಆಕೆಯ ಗಂಡ ಮತ್ತು ಮಗಳು ಸೇರಿದಂತೆ ಇಡೀ ಕುಟುಂಬವೇ ವಿಮಾನ ದುರಂತದಲ್ಲಿ ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣ ಸಮೀಪ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ 158 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರು. ಎಂಟು ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಗಲ್ಫ್‌ನ್ಯೂಸ್‌ನ ಹಣಕಾಸು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಣಿರೇಖಾ ಪೂಂಜಾ, ಅವರ ಗಂಡ ಶಶಿಕಾಂತ್ ಪೂಂಜಾ ಮತ್ತು 17 ವರ್ಷದ ಮಗಳು ಹರ್ಷಿಣಿ ಪೂಂಜಾ ಸಾವನ್ನಪ್ಪಿರುವ ದುರ್ದೈವಿಗಳು. ಹರ್ಷಿಣಿ ಅವರು ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿದ್ದರು. ಮಣಿರೇಖಾ ಅವರು ಸಂಬಂಧಿಯ ಮದುವೆಗೆಂದು ಮಂಗಳೂರಿಗೆ ಆಗಮಿಸಿದ್ದರು. ಈ ಕುಟುಂಬ ಇತ್ತೀಚೆಗಷ್ಟೇ ವೈವಾಹಿಕ ಜೀವನದ ಬೆಳ್ಳಿಹಬ್ಬವನ್ನು ಆಚರಿಸಿಕೊಂಡಿದ್ದರು ಎಂದು ಪೂಂಜಾ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ಆದರೆ ವಿಧಿಯ ಕ್ರೂರ ಅಟ್ಟಹಾಸಕ್ಕೆ ಗಂಡ, ಹೆಂಡತಿ ಮತ್ತು ಮಗಳು ಸಾವನ್ನಪ್ಪಿದ್ದಾರೆ ಎಂದು ಪೂಂಜಾ ಕುಟುಂಬದ ಮೂಲಗಳು ತಿಳಿಸಿವೆ. ಸಂಬಂಧಿಯ ಮದುವೆಗಾಗಿ ಅವರು ಶುಕ್ರವಾರ ಏರ್ ಇಂಡಿಯಾ ವಿಮಾನವೇರಿದ್ದರು.ತಾವು ಕೂಡಲೇ ಮನೆಗೆ ಬರುವುದಾಗಿ ವಿಮಾನ ಲ್ಯಾಂಡ್ ಆಗುವ ಮುನ್ನ ಮನೆಯವರಿಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದರು. ಆದರೆ ಏಕಾಏಕಿ ಸಂಭವಿಸಿದ ದುರ್ಘಟನೆಯಲ್ಲಿ ಕುಟುಂಬವೇ ಸಾವನ್ನಪ್ಪಿದೆ.