ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 30 ವರ್ಷದ ಹಿಂದಿನ ದುರಂತದಲ್ಲಿ ಪಾರಾಗಿದ್ದ ಮೊಯ್ಲಿ (Mangalore Plane Crash | Veerappa Moily | Karnataka | Bajpe Airport | Mishap)
ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ದುರಂತ ಸಂಭವಿಸಿರುವುದು ಇದೇ ಮೊದಲಲ್ಲ. ಎರಡು ದಶಕಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಂ.ವೀರಪ್ಪ ಮೊಯ್ಲಿ ಅವರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ದುರಂತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿರುವುದು ಇಲ್ಲಿ ಸ್ಮರಣಾರ್ಹ.
ಅದು ನಡೆದದ್ದು 1981ರ ಆಗಸ್ಟ್ 19ರಂದು. ಅವರು ಪ್ರಯಾಣಿಸುತ್ತಿದ್ದ ಏವ್ರೋ ವಿಮಾನವು, ರನ್‌ವೇ ಹಾದಿಯ ಶೇ.25ರಷ್ಟು ಪಥ ಬಾಕಿ ಇರುವ ಅಂತರದಲ್ಲಿ ಭೂಸ್ಪರ್ಶ ಮಾಡಿ, ಮುಂದಕ್ಕೋಡಿತ್ತು.
ಪೈಲಟ್ ಬ್ರೇಕ್ ಚಲಾಯಿಸಿದನಾದ. ಧಾವಿಸಿ ಮುಂದಕ್ಕೋಡುತ್ತಿದ್ದ ವಿಮಾನವು ಇನ್ನೂ ಮುಂದಕ್ಕೆ ಹೋಗಿದ್ದಿದ್ದರೆ ಮುನ್ನೂರಡಿ ಆಳದ ಕಣಿವೆಗೆ ಬೀಳುತ್ತಿತ್ತು. ಆದರೆ ಅದೃಷ್ಟವಶಾತ್, ಮೂರು ಬಂಡೆಗಳು ವಿಮಾನವು ಕೆಳಕ್ಕೆ ಜಿಗಿಯದಂತೆ ತಡೆಯಿತು. ಧಾವಿಸಿ ಬಿದ್ದ ರಭಸಕ್ಕೆ ವಿಮಾನದ ಎಂಜಿನ್‌ಗೆ ಬೆಂಕಿ ಹತ್ತಿಕೊಂಡಿತು. ಆದರೆ ಅಗ್ನಿಶಾಮಕ ಯಂತ್ರಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದವು. ಎಲ್ಲ ಪ್ರಯಾಣಿಕರನ್ನು ರಕ್ಷಿಸಲಾಗಿತ್ತು.
ಮೇ 10ರಂದು ಮಂಗಳೂರು ವಿಮಾನ ನಿಲ್ದಾಣದ ಏಕೀಕೃತ ಟರ್ಮಿನಲ್ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ, ಈಗ ಕೇಂದ್ರ ಕಾನೂನು ಸಚಿವರಾಗಿರುವ ವೀರಪ್ಪ ಮೊಯ್ಲಿ ಅವರೇ ಈ ದುರಂತ ಘಟನೆಯನ್ನು ನೆನಪಿಸಿಕೊಂಡಿದ್ದರು ಕೂಡ. ಎರಡು ವಾರಗಳೊಳಗೆ ವಿಮಾನವೊಂದು ದುರಂತಕ್ಕೀಡಾಗಿದೆ.