ಮಂಗಳೂರಿಗೆ ವಿಮಾನದಲ್ಲಿ ಬರುವುದೆಂದರೆ ಯಾವತ್ತಿದ್ದರೂ ಅಪಾಯಕಾರಿ ಎಂಬುದು ವಿಮಾನ ಹಾರಿಸುವ ಪೈಲಟ್‌ಗಳ ಅಂಬೋಣ. ಇದಕ್ಕೆ ಕಾರಣವಿಲ್ಲದಿಲ್ಲ. ಇದೊಂದು 'ಟೇಬಲ್ ಟಾಪ್' ವಿಮಾನ ನಿಲ್ದಾಣ. ಅಂದರೆ ಸುತ್ತಲೂ ಕಣಿವೆಗಳು ಮಧ್ಯದಲ್ಲಿ ಎತ್ತರದ ಭಾಗದಲ್ಲಿರುತ್ತದೆ ರನ್‌ವೇ.
ರನ್‌ವೇಯಿಂದ ಕೇವಲ 30 ಮೀಟರುಗಳ ಅಂತರದಲ್ಲಿ ಸುತ್ತಲೂ ಕಡಿದಾದ ಕಣಿವೆಗಳಿವೆ. ಹತ್ತಾರು ಗ್ರಾಮಗಳಲ್ಲಿ ನಡೆಯುತ್ತಿರುವ ಕೃಷಿ ಚಟುವಟಿಕೆಗಳು, ಹಸಿರಾದ ಗದ್ದೆಯು ವಿಮಾನ ಇಳಿಯುತ್ತಿರುವಂತೆಯೇ ಪ್ರಯಾಣಿಕರಿಗೆ ಗೋಚರಿಸುವ ದೃಶ್ಯ. ಹೀಗಾಗಿ ಹೇಗೆ, ಎಲ್ಲಿ ಇಳಿಸಬೇಕು ಎಂಬುದು ಪೈಲಟ್‌ಗಳಿಗೆ ಗೊಂದಲ ಸೃಷ್ಟಿಸುತ್ತದೆಯಂತೆ.
ಮಂಗಳೂರಿನಿಂದ 20 ಕಿ.ಮೀ. ದೂರದಲ್ಲಿರುವ ಬಜ್ಪೆಯಲ್ಲಿದೆ ಈ ವಿಮಾನ ನಿಲ್ದಾಣ. ಮಂಗಳೂರಿಗೆ ಮತ್ತಷ್ಟು ಹತ್ತಿರವಿರುವ ಕೆಂಜಾರು ಎಂಬಲ್ಲಿ ಹೊಸ ಟರ್ಮಿನಲ್ ವಿಮಾನ ನಿಲ್ದಾಣವನ್ನು ತೀರಾ ಇತ್ತೀಚೆಗೆ ಅಂದರೆ ಮೇ 15ರಂದು ಕೇಂದ್ರ ವಿಮಾನ ಯಾನ ಸಚಿವ ಪ್ರಫುಲ್ ಪಟೇಲ್ ಉದ್ಘಾಟಿಸಿರುವುದು ಕಾಕತಾಳೀಯ.
ಮಂಗಳೂರು ವಿಮಾನ ನಿಲ್ದಾಣವು ವಿಮಾನವು ಲ್ಯಾಂಡ್ ಆಗಲು ಮತ್ತು ಟೇಕಾಫ್ ಆಗಲು ಅತ್ಯಂತ ಕ್ಲಿಷ್ಟಕರವಾದ ಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ವಿಶೇಷವಾಗಿ ಮಳೆ ಬಂದರಂತೂ ಪೈಲಟ್‌ಗಳ ಎದೆ ಡವಡವ. ಎಲ್ಲಿ ಇಳಿಸಬೇಕೆಂಬುದು ದಟ್ಟ ಮಂಜು ಅಥವಾ ಮಳೆಯಿಂದಾಗಿ ಕಾಣಿಸುವುದೇ ಇಲ್ಲ. ಶನಿವಾರ ದುರಂತ ಸಂಭವಿಸಿದಾಗ ಇಲ್ಲಿ ಲೈಲಾ ಚಂಡಮಾರುತದ ಪರಿಣಾಮವೂ ಇತ್ತು ಎಂಬುದನ್ನು ತಳ್ಳಿ ಹಾಕಲಾಗದು. ಯಾಕೆಂದರೆ ಈ ಪ್ರದೇಶದಲ್ಲಿ ಮಳೆಯಾಗುತ್ತಿತ್ತು.
ಕಾಸರಗೋಡು, ಕಣ್ಣೂರು ಮುಂತಾದ ಉತ್ತರ ಕೇರಳದ ಪಟ್ಟಣಗಳು, ಕರಾವಳಿ ಕರ್ನಾಟಕದವರಿಗೆ ಗಲ್ಫ್ ರಾಷ್ಟ್ರಗಳ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಮಂಗಳೂರು ವಿಮಾನ ನಿಲ್ದಾಣದಿಂದ ಇತ್ತೀಚೆಗೆ ದುಬೈ ಮತ್ತಿತರ ಗಲ್ಫ್ ರಾಷ್ಟ್ರಗಳಿಗೆ ವಿಮಾನ ಯಾನ ಆರಂಭವಾಗಿರುವುದರಿಂದ ಯಾವತ್ತೂ ಜನಜಂಗುಳಿಯಿಂದ ಕೂಡಿರುತ್ತದೆ.
ಕೋಯಿಕ್ಕೋಡ್ ವಿಮಾನ ನಿಲ್ದಾಣವೂ ಇದೇ ರೀತಿ 'ಟೇಬಲ್ ಟಾಪ್' ಆಗಿದೆ. ಇಲ್ಲಿ ಇಳಿಸುವಾಗ ಪೈಲಟ್‌ನ ದೃಷ್ಟಿ ಅತ್ಯಂತ ನಿಖರವಾಗಿರಬೇಕಾಗುತ್ತದೆ. ಈ ರೀತಿಯ ಟೇಬಲ್ ಟಾಪ್ ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡ್ ಆಗಲು ಪೈಲಟ್‌ಗಳಿಗೆ ವಿಶೇಷ ತರಬೇತಿ ನೀಡಬೇಕಿರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿಶೇಷವೆಂದರೆ, ಮೊನ್ನೆ ಬಂದಿದ್ದ ಪ್ರಫುಲ್ ಪಟೇಲ್ ಅವರು ಕೂಡ, ದೊಡ್ಡ ವಿಮಾನಗಳಿಗೆ ಈಗಿರುವ 8038 ಅಡಿ ರನ್‌ವೇ ಸಾಲದು, ಇದನ್ನು 1000 ಅಡಿ ಇನ್ನೂ ವಿಸ್ತರಿಸಬೇಕು ಎಂದು ಹೇಳಿದ್ದರು.