ಭಾರತೀನಗರದಲ್ಲಿ ಕಲುಷಿತ ನೀರು ಕುಡಿದು ಸುಮಾರು 1500 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಸುಮಾರು 50 ಜನರಿಗೆ ಕಾಲರಾ ಹಾಗೂ ಕರುಳು ಬೇನೆ ಭೀತಿ ಕಂಡು ಬಂದಿದೆ.
ಕಳೆದ 25 ದಿನಗಳಿಂದ ಕಲುಷಿತ ನೀರು ಪೂರೈಕೆಯಿಂದ ಈಗಾಗಲೇ ಹಲವು ಜನರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇತ್ತೀಚಿಗಿನ ಪ್ರಾಥಮಿಕ ಹಂತದ ಚಿಕಿತ್ಸೆಯ ಬಳಿಕ ಬಂದ ಮಾಹಿತಿ ಪ್ರಕಾರ ಸುಮಾರು 50 ರೋಗಿಗಳಲ್ಲಿ ಕಾಲರಾ ಹಾಗೂ ಕರಳುಬೇನೆ ಕಾಯಿಲೆಗಳು ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಮಧ್ಯೆ ಕಲುಷಿತ ನೀರಿನ ಕಾರಣವನ್ನು ತಿಳಿಯುವ ನಿಟ್ಟಿನಲ್ಲಿ ಜಲಮಂಡಳಿಯು ಬಿಬಿಎಂಪಿ ಜೊತೆ ಕೈಜೋಡಿಸಿ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದು, ಹೊಸ ಪೈಪ್‌ಲೈನ್‌ಗಳ ಜೋಡಣೆ ಪ್ರಾರಂಭಿಸಿದೆ. ಅಲ್ಲದೆ, ಬಿಬಿಎಂಪಿ ಆಯುಕ್ತರು ಆಸ್ಪತ್ರೆಗೆ ಬೇಟಿ ನೀಡಿದ್ದು, ರೋಗಿಗಳ ವಿಚಾರಣೆ ನಡೆಸಿದ್ದಾರೆ.
ಕಲುಷಿತ ನೀರಿನ ಪೂರೈಕೆಯ ಬಗ್ಗೆ ಸ್ಥಳೀಯರು ಈ ಮೊದಲೇ ಮನವಿ ಸಲ್ಲಿಸಿದ್ದರೂ, ಜಲಮಂಡಳಿಯ ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಡುವೆ ಕಲುಷಿತ ನೀರು ಕುಡಿದು ಅಸ್ವಸ್ಥಳಾಗಿ ಒಬ್ಬ ಮಹಿಳೆ ಮೃತಪಟ್ಟಿದ್ದರಿಂದ ಕೋಪಗೊಂಡ ಸಾರ್ವಜನಿಕರು ಪ್ರತಿಭಟನೆಗೆ ಇಳಿದಿದ್ದರು. ಬಳಿಕ ಜಲಮಂಡಳಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು..
|