ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ನೂತನ ಅಧ್ಯಕ್ಷರನ್ನಾಗಿ ಆರ್.ವಿ.ದೇಶಪಾಂಡೆ ಅವರನ್ನು ಹೈಕಮಾಂಡ್ ಗುರುವಾರ ಆಯ್ಕೆ ಮಾಡಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಹಲವು ದಿನಗಳ ಮುಸುಕಿನ ಗುದ್ದಾಟದ ಬಳಿಕ ಕೊನೆಗೂ ಹೈಕಮಾಂಡ್ ಕೆಪಿಸಿಸಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಮೂಲಕ ಅಧ್ಯಕ್ಷಗಾದಿಯ ಪೈಪೋಟಿಗೆ ತೆರೆ ಎಳೆದಿದೆ.
ಕಾಂಗ್ರೆಸ್‌ನ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಮತ್ತೊಬ್ಬ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದೆ.
ಕೆಪಿಸಿಸಿ ಅಧ್ಯಕ್ಷಗಾದಿಗಾಗಿ ಈ ಮೊದಲು ಕಾಂಗ್ರೆಸ್‌ನ ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್,ಡಿ.ಬಿ.ಚಂದ್ರೇಗೌಡ ಸೇರಿದಂತೆ ಹಲವರ ಹೆಸರು ಕೇಳಿಬಂದಿತ್ತು.
ಏತನ್ಮಧ್ಯೆ ಕಾಂಗ್ರೆಸ್‌ನ ಹಿರಿಯ ಮುಖಂಡರು,ಕೆಪಿಸಿಸಿ ಅಧ್ಯಕ್ಷಗಾದಿಯನ್ನು ವಲಸಿಗರಿಗೆ ನೀಡಬಾರದು ಇದರಿಂದಾಗಿ ಪಕ್ಷ ಸಂಘಟನೆಗೆ ತೊಡಕು ಉಂಟಾಗಲಿದೆ ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡಿದ್ದರು. ಆ ಕಾರಣದಿಂದಾಗಿಯೇ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಕರೆಯಿಸಿ ಮಾತುಕತೆ ನಡೆಸಿದ್ದರು.
ಡಿ.ಕೆ.ಶಿವಕುಮಾರ್ ಕುಮಾರ್ ಕೂಡ ದಿಢೀರ್ ಆಗಿ ದೆಹಲಿಗೆ ಭೇಟಿ ನೀಡುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ಕುತೂಹಲ ಮೂಡಿಸಿದ್ದರಾದರು ಪೈಪೋಟಿಯಿಂದಾಗಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಂದೂಡಲಾಗಿತ್ತು.
ಅಂತಿಮವಾಗಿ ಸಿದ್ದರಾಮಯ್ಯ ಮತ್ತು ದೇಶಪಾಂಡೆ ನಡುವೆ ಪೈಪೋಟಿ ಏರ್ಪಟ್ಟಿದ್ದು, ಇದೀಗ ಅಂತಿಮವಾಗಿ ಹೈಕಮಾಂಡ್ ದೇಶಪಾಂಡೆ ಅವರಿಗೆ ಕೆಪಿಸಿಸಿಯ ಸಾರಥ್ಯ ವಹಿಸಿದೆ.
|