ಎರಡೂವರೆ ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಶುಕ್ರವಾರ ಸಚಿವ ಸಂಪುಟ ಸಭೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಲ್ಲಿನ ವಿಕಾಸಭವನದ ಮೂರನೇ ಮಹಡಿಯಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಐತಿಹಾಸಿಕ ದಿನಕ್ಕಾಗಿ ಗುಲ್ಬರ್ಗಾದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ.
ಈ ಮೊದಲು ಆರ್. ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಲ್ಬುರ್ಗಿಯಲ್ಲಿ ಸಚಿವ ಸಂಪುಟ ನಡೆಸಲಾಗಿದ್ದನ್ನು ಹೊರತುಪಡಿಸಿದರೆ, ಆ ಬಳಿಕ ಅಂತಹ ಯಾವುದೇ ಸಭೆ ನಡೆದಿರಲಿಲ್ಲ.
ಇದೇ ತಿಂಗಳ 17ರಂದು ಹೈದರಾಬಾದ್- ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಂಡ ಸಂದರ್ಭದಲ್ಲಿ ಸಂಪುಟ ಸಭೆ ನಡೆಸುವುದಾಗಿ ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಾಳೆ ಸಂಪುಟ ಸಭೆ ನಡೆಸಲು ಸರ್ಕಾರ ತೀರ್ಮಾನಿಸಿದೆ.
ಅಲ್ಲದೆ, ತೀರಾ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಹೈದರಾಬಾದ್- ಕರ್ನಾಟಕ ಪ್ರದೇಶವನ್ನು ಕಡೆಗಣಿಸಲಾಗುತ್ತದೆ ಎಂಬ ಕೊರಗು ನಿವಾರಿಸುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದೆ.
ಈ ಸಂದರ್ಭದಲ್ಲಿ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ, ನಿರ್ಣಯಕ್ಕೆ ಬರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
|