ಆಯಕಟ್ಟಿನ ಸ್ಥಳಗಳ ರಕ್ಷಣೆಗೆ ಕೇಂದ್ರ ಸರ್ಕಾರದ ನೆರವಿನೊಂದಿಗೆ ವಿಶೇಷ ಪಡೆ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದಾಗಿ ಗೃಹ ಸಚಿವ ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.
ಜಲಾಶಯ, ವಿದ್ಯುತ್ ಉತ್ಪಾದನಾ ಘಟಕ ಸೇರಿದಂತೆ ರಾಜ್ಯದ ಕನಿಷ್ಠ 56 ಸೂಕ್ಷ್ಮ ಪ್ರದೇಶಗಳಿಗೆ ವಿಶೇಷ ಭದ್ರತೆ ನೀಡಲು ರಕ್ಷಣಾ ಸಿಬ್ಬಂದಿ ಕೊರತೆ ಇದ್ದು, ಇದಕ್ಕಾಗಿ ಇಂಡಿಯಾ ಮೀಸಲು ಪಡೆ ಎಂಬ ವಿಶೇಷ ದಳವನ್ನು ರಚಿಸಲಾಗುವುದು ಎಂದು ಆಚಾರ್ಯ ಹೇಳಿದರು.
ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಇಲಾಖೆ ಅಧಿಕಾರಿಗಳ ಜತೆ ಈ ಸಂಬಂಧ ಚರ್ಚೆ ನಡೆಸಲಾಗಿದ್ದು, ನೆರವಿನ ಭರವಸೆ ದೊರತಿದೆ ಎಂದು ಹೇಳಿದರು. ರಾಜ್ಯಕ್ಕೆ ಕನಿಷ್ಠ ಸಾವಿರ ಸಿಬ್ಬಂದಿ ಸಾಮರ್ಥ್ಯದ ಎರಡು ತುಕಡಿಗಳ ಅಗತ್ಯ ಇದೆ. ಇದಕ್ಕಾಗಿ ಈ ವಿಶೇಷ ಪಡೆಯನ್ನು ರಚಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಮೊದಲ ಪಡೆಗಳ ಸಿಬ್ಬಂದಿಗೆ ಈಗಾಗಲೇ ಕೊಪ್ಪಳದಲ್ಲಿ ತರಬೇತಿ ನೀಡಲಾಗುತ್ತಿದೆ. ಎರಡನೇ ಪಡೆ ತರಬೇತಿ ಕೇಂದ್ರವನ್ನು ಬಳ್ಳಾರಿಯಲ್ಲಿ ಸ್ಥಾಪಿಸುವ ಪ್ರಸ್ತಾವನೆ ಸರ್ಕಾರಕ್ಕಿದೆ. ಇದರ ಆರಂಭಿಕ ವೆಚ್ಚವನ್ನು ಕೇಂದ್ರ ಭರಿಸಬೇಕಾಗಿದ್ದು, ನಿರ್ವಹಣೆಯನ್ನು ರಾಜ್ಯವೇ ಮಾಡಲಿದೆ.
ರಾಜ್ಯದಲ್ಲಿ ಒಟ್ಟು 450 ಆಯಕಟ್ಟಿನ ಸ್ಥಳಗಳಿದ್ದು, ಅವುಗಳ ಪೈಕಿ 56ನ್ನು ಅತಿಸೂಕ್ಷ್ಮ ಎಂದು ಪರಿಗಣಿಸಲಾಗಿದೆ. ಭಯೋತ್ಪಾದನಾ ಚಟುವಟಿಕೆ ಮತ್ತು ಆಯಕಟ್ಟಿನ ಸ್ಥಳಗಳ ರಕ್ಷಣೆಗಾಗಿ ಲಿಆಂತರಿಕ ಭದ್ರತಾ ಪರಿಶೀಲನಾ ಸಮಿತಿಗಳನ್ನು ಸರ್ಕಾರ ರಚಿಸಿದೆ ಎಂದರು.
|