ರಾಜ್ಯಕ್ಕೆ ಭೇಟಿ ನೀಡಿರುವ ಕೇಂದ್ರ ತನಿಖಾ ತಂಡದ ವಿರುದ್ಧ ಹರಿಹಾಯ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್ ಕುಮಾರ್ ಅವರು,ಮಧ್ಯಂತರ ವರದಿ ನೀಡುವುದನ್ನು ಖಂಡಿಸಲಾಗುವುದು ಎಂದು ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನಾ ಸ್ಥಳಗಳ ವೀಕ್ಷಣೆ ಮಾಡಿದ ನಂತರ ವಾಸ್ತವಾಂಶ ಹಾಗೂ ಸರ್ಕಾರ ಕೈಗೊಂಡ ಕ್ರಮಗಳನ್ನು ಗೌಪ್ಯವಾಗಿ ವರದಿ ಮಾಡಲು ಮಧ್ಯಂತರ ತೀರ್ಪು ನೀಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸೋಮವಾರ ಬೆಳಿಗ್ಗೆ ರಾಜ್ಯಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವಾಲಯದ ಎಂ.ಎನ್.ಕುಮಾವತ್ ಮತ್ತು ಅರುಣ್ ಕುಮಾರ್ ಯಾದವ್ ಗೃಹ ಸಚಿವಾಲಯದ ಪ್ರತಿನಿಧಿಗಳೋ ಅಥವಾ ಯುಪಿಎ ಸರ್ಕಾರದ ಪ್ರತಿನಿಧಿಗಳೋ ಎಂಬ ಅನುಮಾನ ಇದೆ ಎಂದು ಕಿಡಿಕಾರಿದರು.
ಹಿರಿಯ ಅಧಿಕಾರಿಗಳಾದ ಇವರ ನಡವಳಿಕೆ ಹಾಗೂ ಫರ್ಮಾನು ಹೊರಡಿಸುವ ಇವರ ವರ್ತನೆ ಘನತೆಗೆ ಶೋಭೆ ತರುವಂಥದ್ದಲ್ಲ ಎಂದು ಹರಿಹಾಯ್ದರು.
ಸತ್ಯಾಂಶ ಹಾಗೂ ಪರಿಸ್ಥಿತಿಯ ವರದಿಯನ್ನು ಗೌಪ್ಯವಾಗಿ ಇಡುವ ಬದಲು ಬಹಿರಂಗಪಡಿಸಿರುವುದು ಆಶ್ಚರ್ಯಕರ ಎಂದು ಹೇಳಿದರು.
|