ಅಧಿಕಾರದ ಅಮಲು,ಹಣ ಬಲದ ಅಹಂಕಾರದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಉಗ್ರ ವಾಗ್ದಾಳಿ ನಡೆಸಿದ್ದಾರೆ.
ಚರ್ಚ್ ಮೇಲಿನ ದಾಳಿಗೆ ಪ್ರತಿಪಕ್ಷಗಳೇ ಕಾರಣ ಎಂದು ನೇರ ಆರೋಪ ಮಾಡುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ದೂರಿದರು.
ಘಟನೆ ನಡೆದ ಸ್ಥಳಗಳಿಗೆ ಭೇಟಿ ನೀಡಿದ್ದು ತಪ್ಪೇ ಎಂದು ಪ್ರಶ್ನಿಸಿದ ಅವರು, ರಾಜಕಾರಣಿಗಳು ಅಕ್ರಮ ಮಾಡಿದರೆ ಅವರನ್ನು ರಕ್ಷಿಸುವುದರಲ್ಲಿ ಅರ್ಥವಿಲ್ಲ,ಮುಲಾಜಿಲ್ಲದೆ ಬಂಧಿಸಿ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.
ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಕೂಡ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಚರ್ಚ್‌ಗಳ ಮೇಲಿನ ದಾಳಿಯನ್ನು ಭಜರಂಗದಳ ಬಹಿರಂಗವಾಗಿ ಒಪ್ಪಿಕೊಂಡ ಮೇಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಲನ್ನು ಯಾವ ಕಾರಣಕ್ಕಾಗಿ ಹೊಣೆ ಮಾಡುತ್ತಿದ್ದಾರೆಂದು ತರಾಟೆಗೆ ತೆಗೆದುಕೊಂಡರು.
ರಸಗೊಬ್ಬರ ಸಂಬಂಧಿತ ಗೋಲಿಬಾರ್ ವಿಷಯದಲ್ಲೂ ರಾಜ್ಯ ಸರ್ಕಾರ ಪ್ರತಿಪಕ್ಷಗಳ ಮೇಲೆ ಆರೋಪ ಹೊರಿಸಿತ್ತು. ಆದರೆ ಈವರೆಗೆ ಘಟನೆಗೆ ನಿಜವಾದ ಕಾರಣ ಏನೆಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ ಎಂದರು.
|