ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಯನ್ನು ಖಂಡಿಸಿ ಜಾತ್ಯತೀತ ಜನತಾದಳ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯ ನೇತೃತ್ವ ವಹಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸರ್ಕಾರದ ಅಣು ಒಪ್ಪಂದ ನೀತಿ ದೇಶಕ್ಕೆ ಮಾರಕವಾದುದು ಎಂದು ಕಿಡಿಕಾರಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮೇಲೂ ತೀವ್ರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಚರ್ಚ್ ಮೇಲಿನ ದಾಳಿ ಹಾಗೂ ರೈತರ ವಿಷಯ ಸೇರಿದಂತೆ ಹಲವು ವಿಚಾರಗಳಲ್ಲಿ ರಾಜ್ಯ ಸರ್ಕಾರ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯಕ್ಕೆ ಆಗಮಿಸಿದ ಕೇಂದ್ರ ತಂಡ ಹಿಂದೆ ಪ್ರತಿಪಕ್ಷಗಳ ಕೈವಾಡವಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಆದರೆ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತಹ ನಿರ್ಧಾರ ಯಾಕೆ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ ಅವರು, ಇದು ರಾಜ್ಯ ಸರ್ಕಾರದ ತಂತ್ರ ಎಂದು ಕಿಡಿಕಾರಿದ್ದಾರೆ.
ಉಪಚುನಾವಣೆಯನ್ನು ಗುರಿಯಾಗಿಸಿಕೊಂಡು ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು. ಈ ಸಂದರ್ಭದಲ್ಲಿ ಸಿಪಿಐ, ಸಿಪಿಐ(ಎಂ) ಮತ್ತು ಫಾರ್ವರ್ಡ್ ಫ್ರಂಟ್ ಪಕ್ಷಗಳು ಪ್ರತಿಭಟನಾ ರಾಲಿಯಲ್ಲಿ ಪಾಲ್ಗೊಂಡಿದ್ದವು.
|