ಮೈಸೂರಿನಲ್ಲಿ ಕಳೆದ ವಾರ ನಡೆದ ಕೋಮು ಗಲಭೆಯು ವಿಧಾನ ಸಭೆಯಲ್ಲಿ ಗದ್ದಲ ಕೋಲಾಹಲವನ್ನು ಮೂಡಿಸಿದ್ದು ಸದನವನ್ನು ಮುಂದೂಡುವಂತೆ ಮಾಡಿತು. ವಿಧಾನಸಭಾ ಕಲಾಪ ಆರಂಭವಾಗುತ್ತಲೇ ಅಗಲಿದ ಗಣ್ಯರಿಗೆ ಸಂತಾಪ ಸೂಚನಾ ನಿರ್ಣಯ ಕೈಗೊಂಡ ತಕ್ಷಣ, ನಿಯಮ 60ರಡಿ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂಬುದಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೋರಿದ ಹಿನ್ನೆಲೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ಯುದ್ಧ ನಡೆದಿದ್ದು, ಸದನವು ಗೊಂದಲದ ಗೂಡಾಯಿತು.
ಮೈಸೂರು ಘಟನೆಯು ಗಂಭೀರ ವಿಚಾರವಾಗಿದ್ದು ಮೂರು ಮಂದಿ ಪ್ರಾಣಕಳೆದುಕೊಂಡಿದ್ದಾರೆ, ಮೈಸೂರಿನಲ್ಲಿ ಪ್ರಕ್ಷುಬ್ಧತೆ ಇದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ, ಶಾಂತಿ ಸೌಹಾರ್ದತೆಗೆ ಕರ್ನಾಟಕ ಹೆಸರಾಗಿದ್ದರೆ ಮೈಸೂರು ಇದಕ್ಕೆ ಕಪ್ಪು ಚುಕ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ ವಿಷಯದ ಗಂಭೀರತೆ ಅರಿತು ನಿಯಮ 60ರ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂಬುದಾಗಿ ಪ್ರತಿಪಕ್ಷ ಉಪನಾಯ ಟಿ.ಬಿ. ಜಯಚಂದ್ರ ಅವರು ಕೋರಿದರು.
ಈ ವೇಳೆಗೆ ಎದ್ದುನಿಂತ ಸಚಿವ ಸುರೇಶ್ ಕುಮಾರ್ ಮೈಸೂರು ಘಟನೆ ಬಗ್ಗೆ ಚರ್ಚಿಸಲು ಅಭ್ಯಂತರವಿಲ್ಲ. ಆದರೆ ಕಾನೂನು ಸುವ್ಯವಸ್ಥೆ ವಿಚಾರವನ್ನು ನಿಯಮ 60ರಡಿ ಚರ್ಚಿಸಲು ಅವಕಾಶವಿಲ್ಲ, ನಿಯಮ 69ರಡಿ ಚರ್ಚಿಸೋಣ ಎಂದರು.
ಇದಕ್ಕೆ ಒಪ್ಪದ ಸಿದ್ದರಾಮಯ್ಯ ಮೈಸೂರು ಘಟನೆ ಗಂಭೀರವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹಸಚಿವರು ವಿಫಲಾಗಿದ್ದಾರೆ ಎಂದು ಆರೋಪಿಸಿದರು.
ಒಂದು ಹಂತದಲ್ಲಿ ಮೈಸೂರು ಶಾಸಕ ಶಂಕರಲಿಂಗೇ ಗೌಡರು ಮೈಸೂರು ಗಲಭೆಯ ಹಿಂದೆ ವಿಪಕ್ಷ ನಾಯಕ ಸಿದ್ದರಾಯಮಯ್ಯ ಅವರ ಕೈವಾಡ ಇದೆ ಎಂಬುದಾಗಿ ಆರೋಪಿಸಿದಾಗ ಕಾಂಗ್ರೆಸ್ ನಾಯಕರು ಗದ್ದಲ ಎಬ್ಬಿಸಿ ಧರಣಿ ನಡೆಸಿದರು. ಈ ವೇಳೆಗೆ ಸ್ಪೀಕರ್ ಅವರು ಸದನವನ್ನು ಅಪರಾಹ್ನ ಮೂರುಗಂಟೆಗೆ ಮುಂದೂಡಿದರು.
ಆದರೆ, ಮೂರು ಗಂಟೆಗೂ ಗದ್ದಲ ಕೋಲಾಹಲ ಮರುಕಳಿಸಿದ ಕಾರಣ ಸದನದ ಕಲಾಪ ಮುಂದುವರಿಯಲಿಲ್ಲ. |