ಖಾಸಗಿ ಅನನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧನಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ತನ್ನ ಆದೇಶ ಪಾಲಿಸಲು ವಿಫಲವಾದ ರಾಜ್ಯ ಸರಕಾರವನ್ನು ಹೈಕೋರ್ಟು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟಿನಲ್ಲಿ ಈ ಕುರಿತು ತಾನು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಿಗದಿತ ಜುಲೈ 21ಕ್ಕೆ ಮೊದಲೇ ನಡೆಸುವಂತೆ ವಿಶೇಷ ರಜಾಕಾಲದ ಅರ್ಜಿಯನ್ನು ಬಿಜೆಪಿ ಸರಕಾರ ಸಲ್ಲಿಸಲಿದೆ.
ಈ ಬಗ್ಗೆ ಸುದ್ದಿಗಾರರಿಗೆ ಗುರುವಾರ ಮಾಹಿತಿ ನೀಡಿದ ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಹೈಕೋರ್ಟ್ ನಿರ್ದೇಶನಕ್ಕೆ ತಡೆ ಕೋರಿ ಸರಕಾರ ಸಲ್ಲಿಸಿದ್ದ ಅರ್ಜಿಯು ಸುಪ್ರೀಂ ಕೋರ್ಟಿನಲ್ಲಿ ಜು.21ಕ್ಕೆ ವಿಚಾರಣೆಗೆ ಬರಲಿದೆ. ಆದರೆ ಇದನ್ನು ಜುಲೈ 13ರೊಳಗೆ ನಡೆಸುವಂತೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಕರ್ನಾಟಕ ರಾಜ್ಯ ಅನನುದಾನಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕುಸ್ಮಾ) ಸರಕಾರದ ವಿರುದ್ಧ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ, ಆದೇಶ ಅನುಷ್ಠಾನಗೊಳಿಸಲು ಕಾಲಾವಕಾಶ ಕೋರಿದ ಸರಕಾರದ ಮನವಿಯನ್ನು ಹೈಕೋರ್ಟು ತಳ್ಳಿ ಹಾಕಿತ್ತು ಎಂದು ಸಚಿವರು ಹೇಳಿದರು.
ಈ ಹಿನ್ನೆಲೆಯಲ್ಲಿ ಜುಲೈ 13ರೊಳಗೆ ನ್ಯಾಯಾಲಯಕ್ಕೆ ಹಾಜರಾಗಿ ಅಫಿದವಿತ್ ಸಲ್ಲಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟು ಬುಧವಾರ ನೋಟಿಸ್ ಜಾರಿ ಮಾಡಿತ್ತು.
ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಬೋಧನಾ ಕ್ರಮವಾಗಿ ಕನ್ನಡ ಕಡ್ಡಾಯ ಮಾಡಿದ್ದ ಸರಕಾರದ ಆದೇಶಕ್ಕೆ ತಡೆಯಾಜ್ಞೆ ತರುವಲ್ಲಿ 'ಕುಸ್ಮಾ' ಯಶಸ್ವಿಯಾಗಿತ್ತು. ಆದರೆ ಕಳೆದ ವರ್ಷದ ಆದೇಶವನ್ನು ಅನುಷ್ಠಾನಗೊಳಿಸಿಲ್ಲ ಎಂದು 'ಕುಸ್ಮಾ' ಹೈಕೋರ್ಟಿನಲ್ಲಿ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಆ ಬಳಿಕ ಸರಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿತ್ತು. |