ಪ್ರತಿವರ್ಷ ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾವು ಈ ಭಾರಿ ಸೆಪ್ಟೆಂಬರ್ 19ರಿಂದ 28ರ ತನಕ ಅತ್ಯಂತ ವಿಜೃಂಭಣೆಯಿಂದ ನಡೆಯಲಿದ್ದು ಇದಕ್ಕಾಗಿ ಆರು ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂಬುದಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.ವಿಧಾನಸೌಧದಲ್ಲಿ ಗುರುವಾರ ನಡೆದ ದಸರಾ ಉತ್ಸವದ ಉನ್ನತ ಮಟ್ಟದ ಸಮಿತಿ ಸಭೆಯ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಹತ್ತುದಿನಗಳ ಉತ್ಸವವನ್ನು ಅತೀ ವಿಜೃಂಭಣೆಯಿಂದ ನಡೆಸಲಾಗುವುದು ಎಂದೂ ಅವರು ಹೇಳಿದರು.ಹೊರ ರಾಜ್ಯ ಹಾಗೂ ವಿದೇಶಿ ಪ್ರವಾಸಿಗರ ಆಕರ್ಷಣೆಗಾಗಿ ದಸರಾ ಕುರಿತ ವೆಬ್‌ಸೈಟನ್ನು ಎರಡು ತಿಂಗಳ ಮುಂಚಿತವಾಗಿಯೇ ಆರಂಭಿಸಲಾಗುವುದು ಎಂದು ನುಡಿದರು. ಇದರಲ್ಲಿ ವಸತಿ ಗೃಹಗಳು, ಸುತ್ತಮುತ್ತಲಿನ ಪ್ರವಾಸಿ ತಾಣಗಳು ಹಾಗೂ ಇತರ ಮಾಹಿತಿಯನ್ನು ಅದರಲ್ಲಿ ಪ್ರಕಟಿಸಲಾಗುವುದು ಎಂದು ಅವರು ವಿವರಿಸಿದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೆನ್ನಿಸ್‌ನಲ್ಲಿ ಪದಕ ಪಡೆದ ರಾಜ್ಯದ ಇಬ್ಬರು ಕ್ರೀಡಾಪಟುಗಳನ್ನು ದಸರಾ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದ ಅವರು ಇವರಲ್ಲಿ ಒಬ್ಬರು ಮೈಸೂರು ಮೂಲದವರಾಗಿದ್ದು, ಇಬ್ಬರೂ ಅನಿವಾಸಿ ಭಾರತೀಯರಾಗಿದ್ದಾರೆ ಎಂದು ಹೇಳಿದರು. |