ರಾಜ್ಯದ ಐದು ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ನಿರತವಾಗಿವೆ. ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಕೈಗೊಂಡರು.
ಗೋವಿಂದರಾಜ ನಗರದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಸಚಿವ ಸೋಮಣ್ಣ ಪರ ಪಕ್ಷದ ರಾಷ್ಟ್ರೀಯ ನಾಯಕ ಎಂ. ವೆಂಕಯ್ಯ ನಾಯ್ಡು, ಸಂಸದ ಅನಂತಕುಮಾರ್, ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಮುಖಂಡರು ಬಿರುಸಿನ ಪ್ರಚಾರ ನಡೆಸಿದರು.
ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಕೃಷ್ಣ ಪರವಾಗಿ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಸಪಾಂಡೆ ಪ್ರಚಾರ ನಡೆಸಿದರು. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಸೋಮಣ್ಣ ಅವರಿಗೆ ತಕ್ಕ ಪಾಠ ಕಲಿಸುವಂತೆ ಅವರು ಮತದಾರರಲ್ಲಿ ಮನವಿ ಮಾಡಿದರು. ಉಪಚುನಾವಣೆ ನಡೆಯುತ್ತಿರುವ ರಾಜ್ಯದ ಐದೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.