ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಸರಣಿ ಕೊಲೆಗಾರ ವಿಟ್ಲದ ಮೋಹನ್ ಕುಮಾರ್ ವಂಚನೆಗೆ ಬಲಿಯಾದ 18ಮುಗ್ದ ಜೀವಗಳ ಪೈಕಿ ಬಾಬು ಮತ್ತು ಚಂದ್ರಮ್ಮ ದಂಪತಿಗಳ ಮಗಳು ಲೀಲಾವತಿ(22) ಕೂಡ ಸೇರಿದ್ದು, ಈಕೆ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಳು ಎಂಬ ಅಂಶ ಇದೀಗ ಬಯಲಾಗಿದೆ.
ಬಂಟ್ವಾಳ ತಾಲೂಕು ವಾಮಪದವು ಸಮೀಪದ ಚೆನ್ನೈತೋಡಿಯ ನಿವಾಸಿ ಕೃಷಿಕ ಕೆ.ಬಾಬು ಮತ್ತು ಚಂದ್ರಮ್ಮ ದಂಪತಿಗಳ ಪುತ್ರಿ ಲೀಲಾವತಿ. ಈಕೆ ಕುಪ್ಪೆಪದವು ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ವ್ಯಾಸಂಗ ಮಾಡಿದ್ದಳು. ನಂತರ ಸಿಐಟಿಯು ಸಂಘಟನೆಯಲ್ಲಿ ತೊಡಗಿಸಿಕೊಂಡು ಬೀಡಿ ಕಾರ್ಮಿಕರು ಹಾಗೂ ಗೇರುಬೀಜ ಕಾರ್ಖಾನೆ ಕೆಲಸಗಾರರ ಪರ ಹೋರಾಟ ನಡೆಸುತ್ತಿದ್ದಳು.
ಲೀಲಾವತಿ 2004ರ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದ ಪರ ಪ್ರಚಾರ ನಡೆಸಿದ್ದಳು. ಅದೇ ವರ್ಷ ಆಗಸ್ಟ್ ತಿಂಗಳಿನಲ್ಲಿ ತನ್ನ ಮದುವೆಯ ಬಗ್ಗೆ ಮಾತನಾಡಲು ಆನಂದ್ ಎಂಬ ಸ್ನೇಹಿತರು ಮನೆಗೆ ಬರಲಿದ್ದು, ಬಂಟ್ವಾಳ ಪೇಟೆಗೆ ತೆರಳಿ ಕರೆದುಕೊಂಡು ಬರುವುದಾಗಿ ಹೇಳಿಹೋದವಳು ಅಂದಿನಿಂದ ನಾಪತ್ತೆಯಾಗಿದ್ದಳು. ತದನಂತರ ಆಕೆ ನಕ್ಸಲ್ ಹೋರಾಟದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಳು.
ಮಗಳು ಕಾಣೆಯಾದ ಬಗ್ಗೆ ಪೋಷಕರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ, ತನಿಖೆ ನಡೆಸುವ ಗೋಜಿಗೆ ಹೋಗದ ಪೊಲೀಸರು ಲೀಲಾವತಿಯ ಹೋರಾಟದ ಹಿನ್ನೆಲೆ ಹಾಗೂ ನಾರಾವಿಯಲ್ಲಿ ನಡೆದಿದ್ದ ಹೋರಾಟಗಾರ ಗದ್ದರ್ ನೇತೃತ್ವದ ಸಭೆಯಲ್ಲಿ ಪಾಲ್ಗೊಂಡಿದ್ದಳು ಎಂಬ ಕಾರಣ ನೀಡಿ ಆಕೆಯನ್ನು ನಕ್ಸಲ್ ಪಟ್ಟಿಗೆ ಸೇರಿಸಲಾಗಿತ್ತು. ಜತೆಗೆ ಲೀಲಾವತಿ ಭಾವಚಿತ್ರ ಪ್ರಕಟಿಸಿದ್ದ ಪೊಲೀಸರು ಆಕೆಯ ಬಗ್ಗೆ ಮಾಹಿತಿ ನೀಡಿದವರಿಗೆ 1ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು.
ಲೀಲಾವತಿ ನಕ್ಸಲರ ಪರಿಷ್ಕೃತ ಪಟ್ಟಿಯಲ್ಲಿಯೂ ಸ್ಥಾನ ಪಡೆದಿದ್ದಳು ಎಂದು ಪಶ್ಚಿಮ ವಲಯ ಐಜಿಪಿ ಗೋಪಾಲ್ ಹೊಸೂರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಲೀಲಾವತಿ ನಕ್ಸಲ್ ಚಳವಳಿಯಲ್ಲಿ ತೊಡಗಿಕೊಂಡಿದ್ದಳು ಎಂಬ ಅಂಶವನ್ನು ಪೂರ್ಣವಾಗಿ ಅಲ್ಲಗಳೆಯುವಂತಿಲ್ಲ ಎಂದು ಹೇಳಿರುವ ಅವರು, ಆಕೆಯ ಸಾವು ಹಾಗೂ ಇನ್ನಿತರ ವಿವರಗಳ ಬಗ್ಗೆ ಇನ್ನಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಸರಣಿ ಹಂತಕ ಮೋಹನ್ ಪೊಲೀಸ್ ಕಸ್ಟಡಿಗೆ: ಸರಣಿ ಕೊಲೆ ಆರೋಪಿ ಮೋಹನ್ ಕುಮಾರ್‌ನನ್ನು ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್‌ನ ಹಿರಿಯ ವಿಭಾಗದ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯಕ್ಕೆ ಗುರುವಾರ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆರೋಪಿಯನ್ನು ಅ.27ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು.
ಆರೋಪಿ ಮಾತ್ರ ಯಾವುದೇ ಅಂಜಿಕೆ ಇಲ್ಲದೆ ಪೊಲೀಸರ ಪ್ರಶ್ನೆಗೆ ಉತ್ತರಿಸುತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನೊಂದೆಡೆ ನಾಪತ್ತೆಯಾಗಿರುವ ಯುವತಿಯರ ಪೋಷಕರು, ತಮ್ಮ ಪುತ್ರಿಯರ ಭಾವಚಿತ್ರ ಸಹಿತ ಬಂಟ್ವಾಳ ಪೊಲೀಸ್ ಠಾಣೆಗೆ ಬಂದು ಮಾಹಿತಿ ಪಡೆಯಲೆತ್ನಿಸುತ್ತಿರುವುದು ಗುರುವಾರ ಕಂಡು ಬಂದಿತ್ತು.