ರೇಷ್ಮೆ ಮತ್ತು ಸಣ್ಣ ಕೈಗಾರಿಕೆ ಸಚಿವ ವೆಂಕಟರಮಣಪ್ಪನವರಿಗೆ ಬೆದರಿಕೆ ಹಾಕಿದ್ದ ನಕಲಿ ನಕ್ಸಲ್ ಯುವಕನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಅನುಧಾನಪುರ ವಾಸಿ ಕುರುಬ ಜನಾಂಗದ ನಾರಾಯಣಪ್ಪನ ಮಗ ಕೊಂಡಯ್ಯ ಎಂದು ಗುರುತಿಸಲಾಗಿದೆ. ಈತ ಬುಧವಾರ ಸಂಜೆ ಸಚಿವರಿಗೆ ಮೊಬೈಲ್ ಮೂಲಕ ಅವಾಚ್ಯ ಶಬ್ದಗಳೊಂದಿಗೆ ಬೆದರಿಕೆ ಹಾಕಿದ್ದ. ಪೊಲೀಸರು ಮೊಬೈಲ್ ನಂಬರ್ ಜಾಡು ಹಿಡಿದು ಶೋಧ ಕೈಗೊಂಡ ಪರಿಣಾಮ ನಕಲಿ ನಕ್ಸಲ್ ಕೊಂಡಯ್ಯ ಪೊಲೀಸರ ಅತಿಥಿಯಾಗಿದ್ದಾನೆ.
ವಿಚಾರಣೆ ವೇಳೆ ಕೊಂಡಯ್ಯ, ಬಡವರ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ಹೇಗೆ ತರಬೇಕೆಂದು ಯೋಚಿಸುತ್ತಿರುವಾಗ ಪತ್ರಿಕೆಯ ವರದಿಗಾರನೊಬ್ಬ ನಕ್ಸಲ್ ಹೆಸರಿನಲ್ಲಿ ಬೆದರಿಕೆ ಪತ್ರ ಬರೆದು ಕೊಡು ಎಂದು ಬಲವಂತವಾಗಿ ನನ್ನಿಂದ ಪತ್ರ ಬರೆಸಿಕೊಂಡನು ಎಂದು ತಿಳಿಸಿದ್ದಾನೆ.
ಪ್ರಕರಣದ ಬಗ್ಗೆ ಸರ್ಕಲ್ ಇನ್ಸ್‌ಪೆಕ್ಟರ್ ನಾರಾಯಣಸ್ವಾಮಿ ನೇತೃತ್ವದಲ್ಲಿ ಪಿಎಸ್‌ಐ ಮುನಿರಾಜು ಮುಂದಿನ ಕ್ರಮ ಕೈಗೊಂಡಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.