ವಿಧಾನಪರಿಷತ್ತಿಗೆ ಮೂವರು ಸದಸ್ಯರನ್ನು ನೇಮಕ ಮಾಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಅಧಿಕಾರ ನೀಡುವ ಕುರಿತು ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.
ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವರ್ಷದ ಜನವರಿ ತಿಂಗಳಲ್ಲೇ ಮೂವರು ನಾಮಕರಣಗೊಂಡ ಸದಸ್ಯರು ನಿವೃತ್ತಿ ಹೊಂದಲಿದ್ದು, ಆ ಸ್ಥಾನಗಳಿಗೆ ಹೊಸದಾಗಿ ನಾಮಕರಣ ಮಾಡಬೇಕಾಗುತ್ತದೆ ಎಂದರು.
ವಿಧಾನಪರಿಷತ್ ಸದಸ್ಯರಾದ ಖ್ಯಾತ ಸಾಹಿತಿ ಹಾಗೂ ನಾಟಕಕಾರ ಡಾ.ಚಂದ್ರಶೇಖರ ಕಂಬಾರ, ಮಾಜಿ ಕ್ರಿಕೆಟಿಗ ಪ್ರಕಾಶ್ ರಾಥೋಡ್ ಹಾಗೂ ಮಲ್ಲಾಜಮ್ಮ ಜನವರಿಯ ಮೊದಲ ವಾರದಲ್ಲಿ ನಿವೃತ್ತರಾಗಲಿದ್ದು, ಆ ಸ್ಥಾನಗಳಿಗೆ ಅರ್ಹ ವ್ಯಕ್ತಿಗಳನ್ನು ತರುವ ಹೊಣೆಗಾರಿಕೆಯನ್ನು ಮುಖ್ಯಮಂತ್ರಿಯವರಿಗೆ ಬಿಡಲಾಗಿದೆ ಎಂದು ಆಚಾರ್ಯ ಹೇಳಿದರು.
ಸಾಹಿತಿಗಳು, ಸಮಾಜ ಸೇವಕರು, ಕಲಾವಿದರು, ಕ್ರೀಡಾಪಟುಗಳು ಹೀಗೆ ಸಮಾಜಕ್ಕೆ ಸೇವೆ ಸಲ್ಲಿಸಿದ ವಿವಿಧ ವರ್ಗದ ಗಣ್ಯರನ್ನು ಮೇಲ್ಮನೆಗೆ ನಾಮಕರಣ ಮಾಡುವ ಪರಿಪಾಠ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.