ಶಿಸ್ತಿನ ಬಿಜೆಪಿ ಪಕ್ಷಕ್ಕೆ ಈ ಸ್ಥಿತಿ ಬರಬಾರದಿತ್ತು:ಕೃಷ್ಣ ವ್ಯಂಗ್ಯ
ಬೆಂಗಳೂರು, ಬುಧವಾರ, 28 ಅಕ್ಟೋಬರ್ 2009( 17:20 IST )
NRB
ಶಿಸ್ತಿನ ಪಕ್ಷವೆಂದು ಮೆರೆಯುತ್ತಿದ್ದ ಬಿಜೆಪಿ ಪಕ್ಷ ಇಂದು ದಿಕ್ಕು, ದೆಸೆ, ಗೊತ್ತು-ಗುರಿಯಿಲ್ಲದೆ ಚಿಂತಾಜನಕ ಸ್ಥಿತಿಯಲ್ಲಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಇಂದು ಕವಲು ದಾರಿಯಲ್ಲಿದೆ. ಬಡಿದಾಡುವವರು ಬಡಿದಾಡಿಕೊಳ್ಳಲಿ. ಆ ಬಗ್ಗೆ ಕಾಂಗ್ರೆಸ್ ಪಕ್ಷ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದರು.
ಪಕ್ಷದ ಕಚೇರಿಯಲ್ಲಿ ಬುಧವಾರ ತಮ್ಮ ಸದಸ್ಯತ್ವವನ್ನು ನವೀಕರಣ ಮಾಡಿದ ನಂತರ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಇಂದು ಕವಲು ದಾರಿಯಲ್ಲಿದೆ. ರಾಜ್ಯದ ಕೆಲ ಪ್ರಾದೇಶಿಕ ಪಕ್ಷಗಳು ಅಲ್ಲೊಂದು, ಇಲ್ಲೊಂದು ಕ್ಷೇತ್ರದಲ್ಲಿ ಗೆದ್ದು ತಮ್ಮ ಪ್ರಭಾವ ಬೆಳೆಸಿಕೊಂಡಿರಬಹುದು. ಆ ಬಗ್ಗೆ ಕಾಂಗ್ರೆಸ್ ಪಕ್ಷ ಚಿಂತಿಸುವ ಅಗತ್ಯವಿಲ್ಲ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷವನ್ನು ಸದೃಢ ಹಾಗೂ ಶಿಸ್ತಿನ ಪಕ್ಷವನ್ನಾಗಿ ಬಳಸಿಕೊಂಡು ಹೋಗುವತ್ತ ಕಾಂಗ್ರೆಸ್ ಪಕ್ಷ ಸಜ್ಜಾಗಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಬಿಟ್ಟರೆ ಬೇರೆಲ್ಲಾ ರಾಜಕೀಯ ಪಕ್ಷಗಳು ಗೊಂದಲಮಯ ವಾತಾವರಣದಲ್ಲೇ ಕಾಲ ಕಳೆಯುತ್ತಿದೆ. ಇದು ಸಾಮಾನ್ಯ ರಾಜಕೀಯ ಪ್ರಜ್ಞೆ ಇರುವವರಿಗೂ ಅರ್ಥವಾಗಿದೆ ಎಂದ ಅವರು, ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷವಾಗಿ ಬೆಳೆಯಬೇಕಿದೆ ಎಂದರು.