ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಳ್ಳಾರಿ ಗಣಿಧಣಿಗಳ ನಡುವಿನ ಬಿಕ್ಕಟ್ಟು ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಏತನ್ಮಧ್ಯೆ ಸಿಎಂ ರೆಡ್ಡಿ ಸಹೋದರರಿಗೆ ಗುರುವಾರವೂ ಮತ್ತೊಂದು ಶಾಕ್ ಕೊಟ್ಟಿದ್ದಾರೆ.
ಬಳ್ಳಾರಿಯ ಹೆಚ್ಚುವರಿ ಎಸ್ಪಿ ಅಶೋಕ್ ಕುರೇರಾ ಅವರನ್ನು ಗುರುವಾರ ಬೆಳಿಗ್ಗೆ ರಾಜ್ಯ ಸರ್ಕಾರ ದಿಢೀರ್ ಆಗಿ ಎತ್ತಂಗಡಿ ಮಾಡುವ ಮೂಲಕ ರೆಡ್ಡಿ ಸಹೋದರರಿಗೆ ಸಿಎಂ ಮತ್ತೊಂದು ತಿರುಗೇಟು ನೀಡಿದ್ದಾರೆ. ಕುರೇರಾ ಅವರನ್ನು ರಾಜ್ಯ ಗುಪ್ತಚರ ಇಲಾಖೆಗೆ ವರ್ಗಾಯಿಸಲಾಗಿದೆ.
ಅಲ್ಲದೆ, ಬಳ್ಳಾರಿ ಹಾಗೂ ಗದಗ ಜಿಲ್ಲೆಯ 21ಕ್ಕೂ ಹೆಚ್ಚಿನ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆನ್ನಲಾಗಿದೆ. ಇದರೊಂದಿಗೆ ರೆಡ್ಡಿಗಳ ಬಲಪ್ರದರ್ಶನಕ್ಕೆ ಮುಖ್ಯಮಂತ್ರಿಗಳು ಸೆಡ್ಡು ಹೊಡೆದಿರುವುದು ಕೂಡ ಸ್ಪಷ್ಟವಾಗಿದೆ.
ರಾಜ್ಯದಲ್ಲಿ ಇಂದೂ ಕೂಡ ಸಭೆಗಳ ಮೇಲೆ ಸಭೆ ನಡೆಯುತ್ತಿದೆ. ಸಿಎಂ ನಿವಾಸದಲ್ಲಿ ರಾಜ್ಯಾಧ್ಯಕ್ಷ ಸದಾನಂದ ಗೌಡರು ಚರ್ಚೆ ನಡೆಸುತ್ತಿದ್ದರೆ. ಮತ್ತೊಂದೆಡೆ ಪಕ್ಷದ ಹೈಕಮಾಂಡ್ ಕೂಡ ರಾಜಿ ಸೂತ್ರಕ್ಕೆ ಯತ್ನಿಸುತ್ತಿದ್ದರು ಸಹ ಅತೃಪ್ತ ಶಾಸಕರು, ರೆಡ್ಡಿಗಳು ಸೊಪ್ಪು ಹಾಕದಿರುವುದು ಬಿಕ್ಕಟ್ಟು ಉಲ್ಬಣಕ್ಕೆ ಕಾರಣವಾಗಿದೆ.
ಬುಧವಾರವಷ್ಟೇ ಬಳ್ಳಾರಿಯ ಪೊಲೀಸ್ ವರಿಷ್ಠಾಧಿಕಾರಿ ಸೀಮಂತ್ ಕುಮಾರ್ ಸಿಂಗ್, ಜಿಲ್ಲಾಧಿಕಾರಿ ಶಿವಪ್ಪ, ಡಿಸಿಎಫ್ ಮುತ್ತಯ್ಯ ಹಾಗೂ ನಗರದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಆರ್.ಪೆರುಮಾಳ್ ಅವರನ್ನು ದಿಢೀರ್ ಆಗಿ ವರ್ಗಾವಣೆ ಮಾಡಿದ್ದರು.