ರಾಜ್ಯ ಬಿಜೆಪಿ ಸರ್ಕಾರಕ್ಕೆ 'ಪರ್ಯಾಯ ನಾಯಕ' ಎಂದೇ ಬಿಂಬಿತವಾಗುತ್ತಿರುವ ಹಾಲಿ ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಅವರು ಬುಧವಾರ ಇಲ್ಲಿನ ಸುತ್ತೂರು ಮಠಕ್ಕೆ ಭೇಟಿ ನೀಡಿ, ರಾಜಕೀಯ ಬೆಳವಣಿಗೆಗಳ ಕುರಿತು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.
ಬುಧವಾರ 2ಗಂಟೆಗೆ ಚಾಮುಂಡಿಬೆಟ್ಟ ತಪ್ಪಲಿನಲ್ಲಿರುವ ಮಠಕ್ಕೆ ಆಗಮಿಸಿದ ಅವರು, 3-35ರವರೆಗೆ ಶ್ರೀಗಳೊಂದಿಗೆ ಚರ್ಚಿಸಿದರು.
ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಬಳ್ಳಾರಿ ರೆಡ್ಡಿ ಬಳಗವು ತಮ್ಮನ್ನು ಪರ್ಯಾಯ ನಾಯಕನನ್ನಾಗಿ ರೂಪಿಸಲು ತಂತ್ರ ರೂಪಿಸುತ್ತಿದ್ದಾರೆ. ಇದರಲ್ಲಿ ಕೈಜೋಡಿಸಬೇಕೋ, ಬೇಡವೋ ಎಂಬ ಗೊಂದಲದಲ್ಲಿದ್ದೇನೆ. ಹಲವು ಮಂದಿ ಸಚಿವ-ಶಾಸಕರು ಒತ್ತಡ ತರುತ್ತಿದ್ದಾರೆ ಎಂದು ಸ್ವಾಮೀಜಿಗೆ ವಿವರಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿಧಾನಸಭಾಧ್ಯಕ್ಷ ಹುದ್ದೆಯಲ್ಲಿ ಇರುವುದರಿಂದ ಯಾವುದೇ ರಾಜಕೀಯ ವಿದ್ಯಮಾನಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ರಾಜಕೀಯ ವಿದ್ಯಮಾನಗಳನ್ನು ಕಾದು ನೋಡುತ್ತೇನೆ ಎಂದರು. ಎಲ್ಲವೂ ದೇವರ ಕೈಯಲ್ಲಿ...ನಾನೇನು ಮಾಡುವುದಿಲ್ಲ. ನನ್ನ ಕೈಯಲ್ಲಿ ಯಾವುದೂ ಇಲ್ಲ. ಎಲ್ಲವೂ ದೇವರ ಕೈಯಲ್ಲಿದೆ ಎಂದು ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ಉತ್ತರ ನೀಡಿದರು.