ನಮ್ಮ ಕುಟುಂಬ ಯಾವುದೇ ಬೇನಾಮಿ ಆಸ್ತಿ ಹೊಂದಿಲ್ಲ. ಈ ಬಗ್ಗೆ ಯಾವುದೇ ದೇವಸ್ಥಾನದಲ್ಲೂ ಪ್ರಮಾಣ ಮಾಡಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದವರು ನೈಸ್ ರಸ್ತೆಯ ಅಕ್ಕ-ಪಕ್ಕದಲ್ಲಿ 4ಸಾವಿರ ಎಕರೆಗೂ ಹೆಚ್ಚಿನ ಆಸ್ತಿಯನ್ನು ಬೇನಾಮಿ ಹೆಸರಲ್ಲಿ ಮಾಡಿದ್ದಾರೆಂದು ಬಿಜೆಪಿಯ ದೆಹಲಿ ವಿಶೇಷ ಪ್ರತಿನಿಧಿ ಧನಂಜಯ್ ಕುಮಾರ್ ಗಂಭೀರವಾಗಿ ಆರೋಪಿಸಿದ್ದರು.
ಧನಂಜಯ್ ಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ನೈಸ್ ಸುತ್ತಮುತ್ತ ನಮ್ಮ ಕುಟುಂಬ ಯಾವುದೇ ಆಸ್ತಿ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮ ಕುಟುಂಬ ಆಸ್ತಿ ಹೊಂದಿದೆ ಎಂದು ಧನಂಜಯ್ ಕುಮಾರ್ ಅವರು ಪ್ರಮಾಣ ಮಾಡಿ ಹೇಳಲಿ ಎಂದು ಗುಡುಗಿದ್ದಾರೆ.
ಧನಂಜಯ್ ಕುಮಾರ್ ಅವರು ಅನಾವಶ್ಯಕವಾಗಿ ಆರೋಪ ಹೊರಿಸುವ ಬದಲು ಕೇಂದ್ರದಿಂದ ರಾಜ್ಯಕ್ಕೆ ಒಳ್ಳೆಯ ಯೋಜನೆಗಳನ್ನು ತರಲು ಶ್ರಮಿಸಲಿ ಎಂದು ಸಲಹೆ ನೀಡಿದರು.
ನೈಸ್ ರಸ್ತೆಯ ಅಕ್ಕ-ಪಕ್ಕ ತಮ್ಮ ಕುಟುಂಬದವರು ಆಸ್ತಿ ಮಾಡಿಲ್ಲವೆಂದಾದರೆ ದೇವೇಗೌಡರು ತನ್ನ ಪತ್ನಿ ಹಾಗೂ ಮಕ್ಕಳ ಹೆಸರಿನಲ್ಲಿ ಬಹಿರಂಗವಾಗಿ ಪ್ರಮಾಣ ಮಾಡಲಿ ಎಂದು ಧನಂಜಯ್ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದ್ದರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ರೈತರ ಸಮಸ್ಯೆಗಳನ್ನು ಆಲಿಸದ ಗೌಡರು ಮೈಸೂರು, ಬೆಂಗಳೂರು ಭಾಗದ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದು ಏಕೆ ಎಂದು ಪ್ರಶ್ನಿಸಿದರು.