'ನಟಿ ಐಂದ್ರಿತಾ ರೇ ಮಹಾನ್ ಸುಳ್ಳುಗಾರ್ತಿ' ಎಂದು ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಐಂದ್ರಿತಾ ಕಪಾಳಮೋಕ್ಷ ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ್ದಾರೆ.
ನೂರು ಜನುಮಕೂ ಚಿತ್ರದ ಚಿತ್ರೀಕರಣದ ವೇಳೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಅವರು ಅಸಭ್ಯವಾಗಿ ವರ್ತಿಸಿದ್ದಲ್ಲದೇ, ಕೆನ್ನೆಗೆ ಹೊಡೆದಿರುವುದಾಗಿ ಹೇಳುವ ಮೂಲಕ ಐಂದ್ರಿತಾ ರೇ ವಿವಾದವನ್ನು ಹುಟ್ಟುಹಾಕಿದ್ದರು.
ವಿವಾದದ ಕುರಿತಂತೆ ಖಾಸಿಗಿ ಟಿವಿ ವಾಹಿನಿ ಟಿವಿ9ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ಐಂದ್ರಿತಾಳನ್ನು ನನ್ನ ಮಗಳ ಹಾಗೆ ಕಂಡಿದ್ದೇನೆ. ಅವೆಲ್ಲವನ್ನೂ ಧಿಕ್ಕರಿಸಿ ನಾನು ಆಕೆ ಜತೆ ಫ್ಲರ್ಟ್ ಮಾಡಿದ್ದೇನೆ ಎಂದು ಆರೋಪ ಹೊರಿಸುತ್ತಿರುವುದು ವಿಕೃತ ಮನಸ್ಸಿ ಸ್ಥಿತಿಯವಳು ಎಂದು ಸಾಬೀತು ಮಾಡಿದ್ದಾಳೆ ಎಂದರು.
ಇತ್ತೀಚೆಗಿನ ದಿನಗಳಲ್ಲಿ ಯುವ ನಟ-ನಟಿಯರಿಗೆ ತಾನೇ ಎಂಬ ಅಹಂ ಹೆಚ್ಚಾಗಿದೆ. ನಾನು ಆಕೆಗೆ ಹೊಡೆದಿರುವುದು ನಿಜ. ಹಾಗಂತ ಆಕೆ ಟಿವಿ ಮುಂಭಾಗ ಕಣ್ಣೀರು ಹಾಕುತ್ತ ಹೇಳಿರುವ ವಿಷಯವೆಲ್ಲ ಸತ್ಯವಲ್ಲ. ಆಕೆ ಮಹಾನ್ ಸುಳ್ಳಿಗಾರ್ತಿ ಎಂಬುದು ಇದರಿಂದ ತಿಳಿಯುತ್ತೆ.
ತಾನು ಸಚ್ಚಾರಿತ್ರವುಳ್ಳ ಕುಟುಂಬದ ಹಿನ್ನೆಲೆಯಿಂದ ಬಂದವಳು, ಹಣಕ್ಕಾಗಿ ಅಲ್ಲ ಎನ್ನುವ ಹಾಗಿದ್ದರೆ ಐಂದ್ರಿತಾ ಮನೆಯಲ್ಲಿಯೇ ಕುಳಿತರಲಿ. ಸಿನಿಮಾ ಶೂಟಿಂಗ್‌ನಲ್ಲಿ ಸಮಯ ಪಾಲನೆ,ನಡವಳಿಕೆ ಮುಖ್ಯವಾಗುತ್ತೆ. ಯಾವಾಗಲೂ ಸಿನಿಮಾ ಶೂಟಿಂಗ್‌ಗೆ ಸರಿಯಾದ ಸಮಯಕ್ಕೆ ಐಂದ್ರಿತಾ ಬರುತ್ತಿರಲಿಲ್ಲವಾಗಿತ್ತು. ಅದನ್ನು ನಾನು ತಪ್ಪು ಅಂತ ಹೇಳಿದಾಗ. ತನಗೆ ಒಂದು ಲಕ್ಷ ರೂಪಾಯಿ ಕೊಡಿ ಎಂದು ಕೂಗಾಡಿದ್ದಳು. ಆ ಸಂದರ್ಭ ಹೊಡೆದಿದ್ದೆ. ಆದರೆ ಆಕೆ ಹೇಳುವಂತೆ ನಾನು ಅಸಭ್ಯವಾಗಿ ವರ್ತಿಸಿಲ್ಲ.
ಆಧಾರವಿಲ್ಲದ ಆರೋಪ ಮಾಡುವ ಮೂಲಕ ಐಂದ್ರಿತಾ ಕ್ಯಾಮರಾ ಇಲ್ಲದೆಯೂ ಚೆನ್ನಾಗಿ ನಟಿಸಬಲ್ಲ ಚತುರೆ ಎಂಬುದನ್ನು ಕೂಡ ಸಾಬೀತು ಮಾಡಿದ್ದಾಳೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೂಟಿಂಗ್ ಇದ್ದಾವಾಗಲೆಲ್ಲಾ ರಾತ್ರಿ ಹೊತ್ತು ಕಾಲ್ ಮಾಡಿದ್ದೇನೆ. ಅದನ್ನೇ ಫ್ಲರ್ಟ್ ಮಾಡ್ಲಿಕ್ಕಾಗಿಯೇ ರಾತ್ರಿಯೆಲ್ಲಾ ಕಾಲ್ ಮಾಡುತ್ತಿದ್ದರು ಎನ್ನುವುದು ವಿಕೃತ ಮನಸ್ಸು ಎಂದರು.