ಬಳ್ಳಾರಿಯ ರೆಡ್ಡಿ ಸಹೋದರರ ಜತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಸತ್ಯಕ್ಕೆ ದೂರವಾದದ್ದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಸ್ಪಷ್ಟಪಡಿಸಿದ್ದಾರೆ.
ಕೆಲವು ಮಾಧ್ಯಮಗಳಲ್ಲಿ ರೆಡ್ಡಿ ಸಹೋದರರೊಂದಿಗೆ ಭಿನ್ನಾಭಿಪ್ರಾಯ ಇರುವುದಾಗಿ ವರದಿ ಪ್ರಕಟವಾಗಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ ಎಂದಿರುವ ಅವರು, ಭಿನ್ನಾಭಿಪ್ರಾಯಕ್ಕೆ ಆಸ್ಪದವೇ ಇಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಸರ್ಕಾರದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ. ತಮ್ಮ ಖಾತೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಲಾಗುತ್ತಿದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ತಮ್ಮ ಸಲಹೆ ಕೇಳುತ್ತಿಲ್ಲ. ಬೆಂಬಲಿಗ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಮುಖ್ಯಮಂತ್ರಿ ವಿರುದ್ಧ ಬಳ್ಳಾರಿಯ ಸಚಿವರು ಅಸಮಾಧಾನ ಹೊಂದಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಗದಗ ಜಿಲ್ಲಾಧಿಕಾರಿ ಎನ್.ವಿ.ಪ್ರಸಾದ್ ಎತ್ತಂಗಡಿ ಮಾಡುವಾಗ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅದಿರು ಸಾಗಣೆ ಲಾರಿಗಳ ಮೇಲೆ ಸಾವಿರ ರೂ ತೆರಿಗೆ ವಿಧಿಸಿದಾಗಲೂ ತಮ್ಮ ಸಲಹೆ ತೆಗೆದುಕೊಳ್ಳಲಿಲ್ಲ ಎಂಬ ಆರೋಪ ಸಿಎಂ ವಿರುದ್ಧ ರೆಡ್ಡಿ ಸಹೋದರರಿಂದ ಕೇಳಿ ಬಂದಿದ್ದವು.