ಸಿಂಗೂರಿನಲ್ಲಿ ಟಾಟಾ ಖರೀದಿಸಿದ ಭೂಮಿಯ ಮೇಲೆ ಹೂಡಿದ ಹೂಡಿಕೆಯನ್ನು ತಮಗೆ ನಷ್ಟ ಪರಿಹಾರವಾಗಿ ಸರ್ಕಾರ ನೀಡುವುದಾದರೆ ಪ್ರಸ್ತುತ ಭೂಮಿಯನ್ನು ತಾವು ಹಿಂತಿರುಗಿಸಲು ಸಿದ್ದ ಎಂದು ಟಾಟಾ ಮುಖ್ಯಸ್ಥ ರತನ್ ಟಾಟಾ ತಿಳಿಸಿದ್ದಾರೆ.
ತಾವು ಆ ಭೂಮಿಯಲ್ಲಿ ಠಿಕಾಣಿ ಹೂಡಲು ಬಯಸುವುದಿಲ್ಲ. ನಾವು ಆ ಭೂಮಿಯಲ್ಲಿ ಹೂಡಿಕೆ ನಡೆಸಿದ ಹಣವನ್ನು ರಾಜ್ಯ ಸರ್ಕಾರವು ವಾಪಸ್ ನೀಡುವುದಾದರೆ ಭೂಮಿಯನ್ನು ಹಿಂದಿರುಗಿಸಲು ತಾವು ಸಿದ್ದ ಎಂದು ಟಾಟಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ನ್ಯಾನೋ ಕಾರು ಉತ್ಪಾದನಾ ಘಟಕವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ 997ಎಕರೆ ಭೂಮಿಯನ್ನು ರಾಜ್ಯ ಸರ್ಕಾರದಿಂದ ಗುತ್ತಿಗೆಗೆ ಪಡೆದುಕೊಂಡಿತ್ತು. ಅಲ್ಲಿ ಈ ಬಗ್ಗೆ ವಿವಾದವೆದ್ದ ಹಿನ್ನೆಲೆಯಲ್ಲಿ ನ್ಯಾನೋ ಉತ್ಪಾದನಾ ಘಟಕವನ್ನು ಗುಜರಾತ್‌ನ ಸನಂದ್‌ಗೆ ಸ್ಥಳಾಂತರಿಸಲಾಗಿತ್ತು.
ಟಾಟಾ ಗುತ್ತಿಗೆ ಪಡೆದ ಭೂಮಿಯಲ್ಲಿ 400ಎಕರೆ ಭೂಮಿ ರೈತರಿಗೆ ಸೇರಿದ್ದು, ಇದನ್ನು ರೈತರಿಗೆ ಬಿಟ್ಟು ಕೊಡಬೇಕು ಎಂದು ಕಳೆದ ಅಕ್ಟೋಬರ್‌ನಲ್ಲಿ ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಟಾಟಾ ಗ್ರೂಪ್ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಟಾಟಾ ತನ್ನ ಉದ್ಯಮಕ್ಕೋಸ್ಕರ ರೈತರ ಭೂಮಿಯನ್ನು ಕಬಳಿಸಿದೆ ಎಂದು ಮಮತಾ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಟಾಟಾ ತನ್ನ ಯೋಜನೆಯನ್ನು ಸ್ಥಗಿತಗೊಳಿಸಿ, ಉತ್ಪಾದನಾ ಘಟಕವನ್ನು ಗುಜರಾತ್‌ಗೆ ಸ್ಥಳಾಂತರಿಸಲಾಗಿತ್ತು.