ಡಿಸೆಂಬರ್ 11, 2008 ಭಾರತದ ತಂತ್ರಜ್ಞಾನ ಕ್ಷೇತ್ರಕ್ಕೆ ಅತ್ಯಂತ ಮಹತ್ತರವಾದ ದಿನ. 3ನೇ ಪೀಳಿಗೆಯ ಅಥವಾ 3ಜಿ ಮೊಬೈಲ್ ನೆಟ್ವರ್ಕ್ ಭಾರತಕ್ಕೆ ಕಾಲಿಟ್ಟ ದಿನವಿದು. ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಎಂಟಿಎನ್ಎಲ್ 3ಜಿ ಸೇವೆಯನ್ನು ಆರಂಭಿಸಿದೆ. ದೆಹಲಿಯಲ್ಲಿ ಇದು ಯಶಸ್ವಿಯಾದ ಬಳಿಕ ಮುಂಬಯಿ, ಚೆನ್ನೈ, ಕೋಲ್ಕತಾ, ಬೆಂಗಳೂರುಗಳಿಗೂ 3ಜಿ ಸೇವೆ ಕಾಲಿಡಲಿದೆ.ಅದೇ ಹಳೆಯ ಟೆಲಿಫೋನ್ ತಂತ್ರಜ್ಞಾನಗಳನ್ನು ಭಾರತವು ಸಾಕಷ್ಟು ಸಮಯದಿಂದ ಅನುಸರಿಸುತ್ತಾ ಬಂದಿದೆ. ಸದ್ಯವಿರುವ 2ನೇ ಪೀಳಿಗೆಯ ಅಥವಾ 2ಜಿ ನೆಟ್ವರ್ಕ್‌ಗಳ ಮೂಲಕ ಧ್ವನಿ/ಪಠ್ಯ ಮಾತ್ರವೇ ಸಂವಹನ ಸಾಧ್ಯ. ಅಧಿಕ ವೇಗದಲ್ಲಿ ಡೇಟಾ ವರ್ಗಾವಣೆ ಇದರಲ್ಲಿ ಸಾಧ್ಯವಿಲ್ಲ. ಕಾಲ ಬದಲಾದಂತೆ ಮಾನವನ ಆವಶ್ಯಕತೆಗಳೂ ಬದಲಾಗತೊಡಗಿದವು. ವೀಡಿಯೋ ಸ್ಟ್ರೀಮಿಂಗ್, ಮೊಬೈಲ್ ಟಿವಿ ಮತ್ತು ಮೊಬೈಲ್ ಗೇಮಿಂಗ್ ಮುಂತಾದ ಹೊಸ ತಂತ್ರಜ್ಞಾನಗಳ ಆವಿಷ್ಕಾರವಾದಂತೆ ಇಲ್ಲಿ ಮಾಹಿತಿ ವರ್ಗಾವಣೆಯ ವೇಗಕ್ಕೂ ಅಷ್ಟೇ ಮಹತ್ವ ಬರತೊಡಗಿತು.3 ಜಿ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರಿ ಸ್ವಾಮ್ಯದ ಎಂಟಿಎನ್ಎಲ್ (ಮಹಾನಗರ ಟೆಲಿಫೋನ್ ನಿಗಮ ನಿಯಮಿತ) ಮತ್ತು ಬಿಎಸ್ಎನ್ಎಲ್‌ಗಳು ಇತರ ಖಾಸಗಿ ಸೇವಾಪೂರೈಕೆದಾರರಿಗಿಂತ ಒಂದು ಹೆಜ್ಜೆ ಮುಂದಿವೆ. ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್‌ಗಳು ಇದಕ್ಕೆ ಸಜ್ಜಾಗುತ್ತಿದ್ದಂತೆಯೇ ಹೆಚ್ಚಿನ ಖಾಸಗಿ ನೆಟ್ವರ್ಕ್ ಸೇವಾಪೂರೈಕೆದಾರರು ಕೂಡ ಇದಕ್ಕೆ ಭರದಿಂದ ಸಿದ್ಧವಾಗುತ್ತಿದ್ದು, 2009ರ ಮಧ್ಯಭಾಗದಲ್ಲಿ 3ಜಿ ಸೇವೆ ನೀಡಲು ಸಮರ್ಥರಾಗಬಹುದು. ವಿಭಿನ್ನ 3ಜಿ ಸೇವೆಗಳಿಗಾಗಿ ಎಂಟಿಎನ್ಎಲ್ ಈಗಾಗಲೇ ಹಲವಾರು ಸೇವಾ ಪೂರೈಕೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳತೊಡಗಿದೆ.3- ಜಿ ಏನು, ಎತ್ತ?ಇದು 3ನೇ ಜನರೇಶನ್ ಮೊಬೈಲ್ ಟೆಲಿಫೋನ್ ಸೇವೆಯ ಹೃಸ್ವ ರೂಪ. ಅಧಿಕ ಅಂದರೆ 15-20 MHz ಆವರ್ತನ ಶ್ರೇಣಿ (ಬ್ಯಾಂಡ್‌ವಿಡ್ತ್) ಗಳಲ್ಲಿ 3-ಜಿ ಫೋನ್‌ಗಳು ಕೆಲಸ ಮಾಡುತ್ತವೆ. ಪ್ರಸಕ್ತವಿರುವ ಮೊಬೈಲ್ ಫೋನುಗಳು ಕೆಲಸ ಮಾಡುತ್ತಿರುವುದು 2-ಜಿ ಅಥವಾ 2.5-ಜಿ ಮಾದರಿಯಲ್ಲಿ ಮತ್ತು 30-200 KHz ಬ್ಯಾಂಡ್‌ವಿಡ್ತ್ ಹೊಂದಿರುತ್ತವೆ. ಬ್ಯಾಂಡ್‌ವಿಡ್ತ್ ಎಂದರೆ ಯಾವುದೇ ಡೇಟಾ/ಮಾಹಿತಿಯನ್ನು ಒಂದು ಬಿಂದುವಿನಿಂದ ಮತ್ತೊಂದಕ್ಕೆ ವರ್ಗಾಯಿಸಲು ಬಳಸಲಾಗುವ ತರಂಗಾಂತರಗಳ ಶ್ರೇಣಿಯ ವಿಸ್ತಾರದ ಅಳತೆಗೋಲು ಎನ್ನಬಹುದು. 3-ಜಿ ಶ್ರೇಣಿಯಲ್ಲಿ ಡೇಟಾ ವರ್ಗಾವಣೆಗೆ ಅತ್ಯಧಿಕ ಸಾಮರ್ಥ್ಯ ಮತ್ತು ಗುಣಮಟ್ಟ ಇರುತ್ತದೆ.ಚಾಲ್ತಿಯಲ್ಲಿರುವ 2-ಜಿ ಸೇವೆಗಳ ಅನುಸಾರ, ಮೊಬೈಲ್‌ನಲ್ಲಿ ಒಳ್ಳೆಯ ಸಿಗ್ನಲ್ ಮತ್ತು ಕಡಿಮೆ ಜಿಎಸ್ಎಂ ಟ್ರಾಫಿಕ್ ಸಂದರ್ಭದಲ್ಲಿ ಸುಮಾರು 5 ಕೆಬಿಪಿಎಸ್ ಡೌನ್‌ಲೋಡ್ ವೇಗ ಇರುತ್ತದೆ. ಇದು ಇ-ಮೇಲ್ ಚೆಕ್ ಮಾಡಲು, ಕೆಲವು ವೆಬ್‌ಸೈಟ್‌ಗಳನ್ನು ನೋಡಲು ಮತ್ತು ಸಣ್ಣ ಫೈಲುಗಳನ್ನು ಡೌನ್‌ಲೋಡ್ ಮಾಡಲು ಸಾಕು. 2-ಜಿ ಧ್ವನಿಯ ಮೇಲೆ ಕೇಂದ್ರೀಕೃತವಾಗಿದ್ದರೆ, 3-ಜಿ ಅಧಿಕ ವೇಗದ ಡೇಟಾ ವರ್ಗಾವಣೆ (ಕನಿಷ್ಠ 144 ಕಿಲೋ ಬೈಟ್ಸ್ ಪರ್ ಸೆಕೆಂಡ್ -ಕೆಬಿಪಿಎಸ್) ಬೆಂಬಲಿಸುತ್ತದೆ. ಇದು ಮೊಬೈಲ್ ಫೋನಿನಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂವಹನಕ್ಕೆ ಅನುಕೂಲ ಮಾಡುತ್ತದೆ. ಅಧಿಕ ಗುಣಮಟ್ಟದ ಧ್ವನಿ ಸಂವಹನ, ಇಂಟರಾಕ್ಟಿವ್ ಗೇಮಿಂಗ್, ಚಲನಚಿತ್ರಗಳು, ವೀಡಿಯೋ ಕ್ಲಿಪ್‌ಗಳು ಮತ್ತು ಸಂಗೀತದ ಡೌನ್‌ಲೌಡ್‌ಗೆ, ಪೂರಕವಾಗಿದೆ.ಒಟ್ಟಿನಲ್ಲಿ 3-ಜಿ ಸೇವೆಯು 2-ಜಿ ಸೇವೆಗಿಂತ ನಾಲ್ಕಾರು ಪಟ್ಟು ಹೆಚ್ಚು ಸಾಮರ್ಥ್ಯವುಳ್ಳದ್ದಾಗಿದೆ. ಬಳಕೆದಾರರು ವೀಡಿಯೋ ಕಾನ್ಫರೆನ್ಸಿಂಗ್ ಮತ್ತು ಮೊಬೈಲ್ ಟಿವಿಯಂತಹ ಅತ್ಯಾಧುನಿಕ ಸೌಲಭ್ಯಗಳಲ್ಲಿ ಸ್ಪಷ್ಟತೆಯನ್ನೂ ಪಡೆಯಬಹುದಾಗಿದೆ.ಸರಳವಾಗಿ ಹೇಳಬಹುದಾದರೆ, ಸದ್ಯವಿರುವ ಮೊಬೈಲ್ ತಂತ್ರಜ್ಞಾನದ ಅಡಿಯಲ್ಲಿ ಬಳಕೆದಾರರೊಬ್ಬರು 3 ನಿಮಿಷದ ಒಂದು ಸಂಗೀತ ಫೈಲ್ ಡೌನ್‌ಲೋಡ್ ಮಾಡಿಕೊಳ್ಳಲು 8 ನಿಮಿಷ ತೆಗೆದುಕೊಂಡರೆ, 3-ಜಿ ಮೂಲಕ ಇದು ಕೇವಲ 15 ಸೆಕೆಂಡ್‌ಗಳಲ್ಲಿ ಡೌನ್‌ಲೋಡ್ ಆಗಬಹುದಾಗಿದೆ. ಹೀಗಾಗಿ, ಮನೆಯಲ್ಲಿರುವ ಬ್ರಾಡ್‌ಬ್ಯಾಂಡ್ ಸಂಪರ್ಕದಷ್ಟೇ ವೇಗದಲ್ಲಿ ನೀವು ನಿಮ್ಮ ಮೊಬೈಲ್ ಫೋನಿನಲ್ಲೂ ಅಂತರ್ಜಾಲವನ್ನು ಜಾಲಾಡಬಹುದು.ಇದರಿಂದೇನು ಲಾಭ?ಮೊಬೈಲ್ ಸೇವಾ ಪೂರೈಕೆದಾರರು, ಚಲನಚಿತ್ರಗಳ ಡೌನ್‌ಲೋಡ್, ಮೊಬೈಲ್ ಟಿವಿ ಸೌಲಭ್ಯ ಮುಂತಾದ ಮೌಲ್ಯಾಧಾರಿತ ಸೇವೆಗಳನ್ನು ಬಳಕೆದಾರರಿಗೆ ಒದಗಿಸಲು ಆರಂಭಿಸುತ್ತಾರೆ. ಒಂದು ಅಂದಾಜಿನ ಪ್ರಕಾರ, ಸದ್ಯದ ತಂತ್ರಜ್ಞಾನದಲ್ಲಿ ಧ್ವನಿ ಆಧಾರಿತ ವಿಷಯಗಳನ್ನು ಹೊರತುಪಡಿಸಿದರೆ, ಎಸ್ಎಂಎಸ್ ಮತ್ತು ಇತರ ಧ್ವನಿಯೇತರ ಸೇವೆಗಳಿಂದ ಮೊಬೈಲ್ ಕಂಪನಿಗಳಿಗೆ ದೊರೆಯುತ್ತಿರುವ ಲಾಭ ಕೇವಲ 7ರಿಂದ 10 ಶೇಕಡಾ ಮಾತ್ರ. 3-ಜಿ ಸೇವೆ ಬಂದರೆ, ಇದರ ಪ್ರಮಾಣ ಶೇ.50ರವರೆಗೂ ಏರಬಹುದೆಂಬ ನಿರೀಕ್ಷೆ ಇದೆ.3- ಜಿ ತಂತ್ರಜ್ಞಾನದಿಂದ ಹೆಚ್ಚು ಲಾಭವಾಗುವುದು ಗ್ರಾಮೀಣ ಪ್ರದೇಶಕ್ಕೆ ಅಥವಾ ತೀರಾ ಹಿಂದುಳಿದ ಪ್ರದೇಶಗಳಿಗೆ. ದುಬಾರಿ ಕೇಬಲ್ ಅಳವಡಿಕೆ ಇಲ್ಲದೆಯೇ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಬಳಕೆಯ ಪ್ರಮಾಣವು ಇದರಿಂದಾಗಿ ಹೆಚ್ಚಾಗಬಹುದು. ಯಾಕೆಂದರೆ ಗ್ರಾಮೀಣ ಪ್ರದೇಶಕ್ಕೆ ಕೇಬಲ್ ಅಳವಡಿಕೆಯೇ ಸಮಸ್ಯೆ. ಖರ್ಚು ಕೂಡ ಜಾಸ್ತಿ. ಇದೀಗ 3-ಜಿ ಸೇವೆ ಗ್ರಾಮೀಣ ಪ್ರದೇಶದಲ್ಲಿ ತಂತ್ರಜ್ಞಾನ ವಿಸ್ತರಣೆಗೆ ಸಹಕಾರಿ.ದರ ಹೇಗಿರಬಹುದು?ಎಲ್ಲವೂ ಪಸಂದಾಗಿದೆ... ಅಲ್ಲವೇ? ಆದರೆ, ಹೊಸ ಸೌಲಭ್ಯಗಳು ಯಾವತ್ತೂ ಅಗ್ಗದ ದರದಲ್ಲಿ ದೊರಕುವುದಿಲ್ಲ ಎಂಬುದು ಅಲಿಖಿತ ನಿಯಮ. ಯಾಕೆಂದರೆ, ಹೊರ ದೇಶಗಳಲ್ಲಿ 3-ಜಿ ನಮಗಿಂತ ಮೊದಲೇ ಬಂದಿದೆ. ಅಲ್ಲಿನವರು ತಮ್ಮ ಮಾಸಿಕ ಟೆಲಿಫೋನ್ ಬಿಲ್ ಮೊತ್ತವು ದುಪ್ಪಟ್ಟು ಆಗಿದ್ದುದನ್ನು ಕಂಡಿದ್ದಾರೆ, ಅನುಭವಿಸಿದ್ದಾರೆ.3- ಜಿ ಸೇವೆ ಆರಂಭಿಸಿರುವ ಎಂಟಿಎನ್ಎಲ್ ಸದ್ಯಕ್ಕೆ ಹೆಚ್ಚುವರಿ ದರವೇನೂ ವಿಧಿಸುತ್ತಿಲ್ಲ. ಯಾಕೆಂದರೆ ಗ್ರಾಹಕರು ಇದರ ವಿಶೇಷತೆ ಏನು, ಸಾಮರ್ಥ್ಯವೇನು ಎಂಬುದರ ಬಗ್ಗೆ ಅರಿತುಕೊಳ್ಳಲಿ, ಬಾಯಿಂದ ಬಾಯಿಗೆ ವಿಷಯ ಹರಡಿ ಪ್ರಚಾರವಾಗಲಿ ಎಂಬ ದೂರಾಲೋಚನೆ. ನಿಧಾನವಾಗಿ 3-ಜಿ ಸೇವೆಗಳಿಗೆ ದರ ಪಟ್ಟಿ ಹೊರಬೀಳಬಹುದು, ಖಾಸಗಿಯವರೂ ಈ ಕ್ಷೇತ್ರಕ್ಕೆ ಪ್ರವೇಶಿಸಿದಾಗ ದರ-ಸಮರ ಆರಂಭವಾಗಿ ಬಳಕೆದಾರರಿಗೆ ಉಪಯೋಗವಾಗಬಹುದು.ವಿಶ್ಲೇಷಕರ ಪ್ರಕಾರ, 3-ಜಿ ಸೇವೆಗೆ ಸೆಲ್ ಟವರ್‌ಗಳು ಪರಸ್ಪರ ಸಮೀಪದಲ್ಲಿರಬೇಕಾಗುತ್ತದೆ. ಅಂದರೆ ನಗರವೊಂದರಲ್ಲಿ 3-ಜಿ ಸೇವೆ ಕವರ್ ಮಾಡಬೇಕಿದ್ದರೆ ಹೆಚ್ಚು ಸಂಖ್ಯೆಯಲ್ಲಿ ಟವರ್‌ಗಳು ಬೇಕಾಗುತ್ತವೆ. ಇದರಿಂದಾಗಿ ಟೆಲಿಫೋನ್ ಕಂಪನಿಗಳಿಗೆ ಮೂಲಸೌಕರ್ಯವೂ ಒಂದು ಹೊರೆಯಾಗಲಿದೆ. ಹೀಗಾಗಿ ಭಾರೀ ಅಗ್ಗದಲ್ಲಿ ಈ ಸೇವೆ ದೊರೆಯಬಹುದೆಂದು ನಿರೀಕ್ಷಿಸಲಾಗದು. ತಿಂಗಳಿಗೆ ಅಂದಾಜು 600 ರೂಪಾಯಿಯಿಂದ (ಸೀಮಿತ ಡೇಟಾ) ರೂ. 2000 (ಅನಿಯಮಿತ ಡೇಟಾ) ಶುಲ್ಕ ಇರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಕರೆ ದರಗಳು ಬಹುತೇಕ ಈಗಿರುವಂತೆಯೇ ಇರಬಹುದು.ಇಷ್ಟು ಮಾತ್ರವೇ ಅಲ್ಲ, ಬಳಕೆದಾರರು ಕೂಡ 3-ಜಿ ಸೇವೆ ಪಡೆಯಬೇಕಿದ್ದರೆ ಅದನ್ನು ಬೆಂಬಲಿಸುವಂತಹ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನೂ ಖರೀದಿಸಬೇಕಾಗುತ್ತದೆ. ಸಾಮಾನ್ಯ ಹ್ಯಾಂಡ್‌ಸೆಟ್ ಬೆಲೆ ರೂ. 700 ಇದ್ದರೆ, 3-ಜಿ ಸೌಲಭ್ಯವಿರುವ ಮೊಬೈಲ್ ಹ್ಯಾಂಡ್‌ಸೆಟ್ ಬೆಲೆ ರೂ. 6000ದಿಂದ ಆರಂಭವಾಗುತ್ತದೆ. ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಹ್ಯಾಂಡ್‌ಸೆಟ್‌ಗಳಲ್ಲಿ 3-ಜಿ ಸೌಲಭ್ಯವನ್ನು ಬೆಂಬಲಿಸುವಂತವುಗಳು ಸಾಕಷ್ಟಿವೆ. ಅಂಥವನ್ನು ಖರೀದಿಸಿದವರಿಗೆ ಅನುಕೂಲ. ಇನ್ನು ಆರು ತಿಂಗಳಲ್ಲಿ 3-ಜಿ ಸೇವೆಗಳು ಬಳಕೆದಾರರಿಗೆ ದೊರೆಯಲಿವೆ. ಈ ಹಿನ್ನೆಲೆಯಲ್ಲಿ ಹ್ಯಾಂಡ್‌ಸೆಟ್ ತಯಾರಿಕಾ ಕಂಪನಿಗಳು ಈ ಸೌಲಭ್ಯವಿರುವ ಮೊಬೈಲ್ ಸೆಟ್‌ಗಳ ಬೆಲೆಯನ್ನು ಇಳಿಸುವ ಸಾಧ್ಯತೆಗಳೂ ಇವೆ.ಮುಂದಿನದೇನು?3- ಜಿ ಸೇವೆಗೂ ಸ್ಪರ್ಧೆ ಇದ್ದೇ ಇದೆ. ಅತ್ಯಾಧುನಿಕ ವೈಮ್ಯಾಕ್ಸ್ ತಂತ್ರಜ್ಞಾನದಲ್ಲಿ ಡೇಟಾ ಡೌನ್‌ಲೋಡ್ ವೇಗವು 3-ಜಿಗಿಂತ 10ರಿಂದ 30ರಷ್ಟು ಪಟ್ಟು ಹೆಚ್ಚು ಎನ್ನಲಾಗುತ್ತಿದೆ. ವೈಮ್ಯಾಕ್ಸ್ ತಂತ್ರಜ್ಞಾನವು ಜಾಗತಿಕವಾಗಿ ನೆಲೆ ಸ್ಥಾಪಿಸಿಕೊಳ್ಳಬೇಕಷ್ಟೆ. ಭಾರತದಲ್ಲಿಯೂ ವೈಮ್ಯಾಕ್ಸ್ ಸೇವೆಗೆ ಟೆಂಡರ್ ಕರೆಯಲಾಗುತ್ತಿದೆ ಎಂದು ಟೆಲಿಕಾಂ ಸಚಿವ ಎ.ರಾಜ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಅತ್ಯಾಧುನಿಕ ತಂತ್ರಜ್ಞಾನ ವೈಮ್ಯಾಕ್ಸ್ ಶೀಘ್ರವೇ ಬರಲಿದೆ. ಕಾದು ನೋಡಿ. |