ಕಮ್ಯುನಿಸ್ಟ್ ಆಡಳಿತದ ವಿರುದ್ಧ ಆಂದೋಳನದ 50ನೇ ವರ್ಷಾಚರಣೆ ಮಂಗಳವಾರ ನಡೆಯುವುದಕ್ಕೆ ಮುಂಚಿತವಾಗಿ ಟಿಬೆಟ್‌ನಲ್ಲಿ ಚೀನಾ ಭಾರೀ ಪ್ರಮಾಣದ ಸೇನೆ ನಿಯೋಜಿಸಿದ್ದು, ಇದು ಮುಂಬರುವ ದಿನಗಳಲ್ಲಿ ಮಾನವಹಕ್ಕು ದಮನ ಮತ್ತು ಪ್ರಕ್ಷುಬ್ಧ ವಾತಾವರಣದ ಮುನ್ಸೂಚನೆಯಾಗಿದೆ ಎಂದು ಅಮೆರಿಕದ ಚಿಂತಕರ ಚಾವಡಿಯೊಂದು ತಿಳಿಸಿದೆ.
ಸೇನೆ ನಿಯೋಜನೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಫ್ರೀಡಂ ಹೌಸ್ ಚಿಂತಕರ ಚಾವಡಿ, ಐದು ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಟಿಬೆಟನ್ನರ ಸ್ವಾತಂತ್ರ್ಯ ಇಂದು ಕುಂಠಿತಗೊಂಡಿದೆ ಎಂದು ಹೇಳಿದೆ.
ಅಲ್ಲಿನ ಪರಿಸ್ಥಿತಿ ಗಂಭೀರ ಹಂತವನ್ನು ಮುಟ್ಟಿದೆ ಎಂದು ಫ್ರೀಡಂ ಹೌಸ್ ಎಕ್ಸಿಕ್ಯೂಟಿವ್ ನಿರ್ದೇಶಕ ಜೆನ್ನಿಫರ್ ವಿಂಡ್ಸರ್ ಪ್ರತಿಕ್ರಿಯಿಸಿದ್ದು, "ಟಿಬೆಟ್‌ನಲ್ಲಿ ಚೀನಾದ ಮಾನವ ಹಕ್ಕು ಉಲ್ಲಂಘನೆಗಳನ್ನು ಕಂಡೂಕಾಣದಂತೆ ಅಂತಾರಾಷ್ಟ್ರೀಯ ಸಮುದಾಯ ಕಣ್ಮುಚ್ಚಿ ಕುಳಿತಿದೆ. ಸಾಮಾನ್ಯ ಟಿಬೆಟ್ ಪೌರ ಐದು ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಇಂದು ಕಡಿಮೆ ಮುಕ್ತನಾಗಿದ್ದು, ವೈಯಕ್ತಿಕ ಅಪಾಯದ ಸುಳಿಯಲ್ಲಿ ಸಿಕ್ಕಿದ್ದಾನೆಂದು" ಅವರು ಹೇಳಿದ್ದಾರೆ.
ರಾಜಕೀಯ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯದ ಸಮೀಕ್ಷೆ ನಡೆಸಿರುವ ಫ್ರೀಡಂ ಹೌಸ್ ತನ್ನ ಅಂಕಿಅಂಶಗಳ ವಿಶ್ಲೇಷಣೆಯಲ್ಲಿ ಚೀನಾದಲ್ಲಿ 2004ರಿಂದೀಚೆಗೆ ನಾಗರಿಕ ಸ್ವಾತಂತ್ರ್ಯಗಳ ಜಾರಿಯಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಅನೇಕ ರೀತಿಯಲ್ಲಿ ಚೀನಾ ದಮನಕಾರಿ ನೀತಿ ಅನುಸರಿಸಿದೆಯೆಂದು ತಿಳಿಸಿದೆ. |