ಬೆಲೆಬಾಳುವ ಧಾರ್ಮಿಕ ಪುಸ್ತಕಗಳಿಂದ ಕೂಡಿದ ಲಂಡನ್‌ನ ಅತೀ ಪ್ರಮುಖ ಗುರುದ್ವಾರವೊಂದು ಜನಾಂಗೀಯ ದಾಳಿಗೆ ಸುಟ್ಟುಭಸ್ಮವಾಗಿದೆಯೆಂದು ವರದಿಯೊಂದು ತಿಳಿಸಿದೆ.
ಪೂರ್ವ ಲಂಡನ್‌ನ ಗುರುದ್ವಾರ ಸಿಖ್ ಸಂಗಾತ್‌ಗೆ ಪ್ರವೇಶಿಸಿದ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ್ದಾನೆಂದು ಶಂಕಿಸಲಾಗಿದ್ದು, ಬೆಂಕಿಕೆನ್ನಾಲಿಗೆ ಆವರಿಸುವಷ್ಟರಲ್ಲಿ ಆ ವ್ಯಕ್ತಿ ತಪ್ಪಿಸಿಕೊಂಡನೆಂದು ಪ್ರತ್ಯಕ್ಷದರ್ಶಿಗಳು ಮಂಗಳವಾರ ತಿಳಿಸಿದ್ದಾರೆ. 1979ರಲ್ಲಿ ನಿರ್ಮಿಸಲಾದ ಗುರುದ್ವಾರದಲ್ಲಿ ಹೊತ್ತಿ ಉರಿಯುವ ಬೆಂಕಿಯನ್ನು ನಂದಿಸಲು ಮಹಿಳೆಯರ ಗುಂಪೊಂದು ಪ್ರಯತ್ನಿಸಿತು.
ಗುರುದ್ವಾರದ ಚಾವಣಿ ಕುಸಿದುಬಿದ್ದಿದ್ದು, 8 ಪವಿತ್ರ ಸಿಖ್ ಗ್ರಂಥಗಳಲ್ಲಿ ಒಂದನ್ನು ಹೊರತುಪಡಿಸಿ ಎಲ್ಲವೂ ಸುಟ್ಟುಭಸ್ಮವಾಗಿದೆಯೆಂದು ಆರಾಧಕರು ಶಂಕಿಸಿದ್ದಾರೆ. ಶಂಕಿತ ದುಷ್ಕರ್ಮಿ ಕರಿಯ ಅಥವಾ ಮಿಶ್ರ ಜನಾಂಗಕ್ಕೆ ಸೇರಿದವನಂತೆ ಕಂಡುಬಂದನೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಗುರುದ್ವಾರದ ಹೊರಗೋಡೆಯಲ್ಲಿ ಕಳೆದ ಕೆಲವು ವಾರಗಳಿಂದ ಜನಾಂಗೀಯ ನಿಂದನೆಯ ಬರೆಹಗಳು ಗೋಚರಿಸಿದ್ದಾಗಿ ಆರಾಧಕರು ತಿಳಿಸಿದ್ದಾರೆ.
ಕ್ರಿಮಿನಲ್ ತನಿಖೆಯನ್ನು ಆರಂಭಿಸಲಾಗಿದ್ದು, ಪೊಲೀಸರು ಮತ್ತು ತನಿಖೆದಾರರು ಬೆಂಕಿಯನ್ನು ಮಾನವಕೃತ್ಯವೆಂದು ಶಂಕಿಸಿದ್ದಾರೆ. 1854ರಲ್ಲಿ ಕಟ್ಟಿಸಿದ ಈ ಕಟ್ಟಡದ ಶೇ.75ರಷ್ಟು ಭಾಗ ಸುಟ್ಟುಹೋಗಿದ್ದು, ಮೇಲ್ಛಾವಣಿ ಕೂಡ ಬೆಂಕಿಯಿಂದ ನಾಶವಾಗಿದೆಯೆಂದು ಲಂಡನ್ ಅಗ್ನಿಶಾಮಕ ಖಚಿತಪಡಿಸಿದೆ.
|