ಸೊಮಾಲಿಯ ರಾಜಧಾನಿ ಮೊಗದಿಶುವಿನಲ್ಲಿ ಗುರುವಾರ ಅಧ್ಯಕ್ಷರ ವಿಮಾನದ ಮೇಲೆ ಬಂಡುಕೋರರು ಮಾರ್ಟರ್ ಬಾಂಬ್ ದಾಳಿ ನಡೆಸಿದ ಬಳಿಕ ಆಫ್ರಿಕನ್ ಒಕ್ಕೂಟದ ಶಾಂತಿಪಾಲನೆ ಪಡೆ ಪ್ರತಿದಾಳಿ ನಡೆಸಿದ್ದರಿಂದ ಕನಿಷ್ಠ 30 ಜನರು ಬಲಿಯಾಗಿದ್ದಾರೆ. ಉಗಾಂಡದ ಶೃಂಗಸಭೆಗೆ ತೆರಳುತ್ತಿದ್ದ ಅಧ್ಯಕ್ಷ ಶೇಕ್ ಶರೀಫ್ ಅಹ್ಮದ್ ಈ ದಾಳಿಯಲ್ಲಿ ಅಪಾಯವಿಲ್ಲದೇ ಪಾರಾಗಿದ್ದಾರೆ.
ಆದರೆ ಕಳೆದ ಕೆಲವು ವಾರಗಳಿಂದ ಬಂಡುಕೋರರು ಮತ್ತು ಸೇನೆ ನಡುವೆ ನಡೆದ ಚಕಮಕಿಗಳಲ್ಲೇ ತೀವ್ರವೆಂದು ಹೇಳಲಾದ ಚಕಮಕಿಯಲ್ಲಿ ಕನಿಷ್ಠ 30 ಜನರು ಅಸುನೀಗಿದ್ದಾರೆ ಮತ್ತು ಅನೇಕ ಮಂದಿ ಗಾಯಗೊಂಡಿದ್ದಾರೆಂದು ನಿವಾಸಿಗಳು ಮತ್ತು ವೈದ್ಯಕೀಯ ಕಾರ್ಯಕರ್ತರು ತಿಳಿಸಿದ್ದಾರೆ. ಬಕಾರಾ ಮಾರುಕಟ್ಟೆಯಲ್ಲಿ ಶೆಲ್ ದಾಳಿಯಿಂದ ಮನೆಯೊಂದು ಸಂಪೂರ್ಣ ನಾಶವಾಗಿದ್ದು, 6 ಮಂದಿ ಸತ್ತಿದ್ದಾರೆ.
ಕರಾವಳಿ ವಾಯುನೆಲೆಯಿಂದ ಹೊರಟ ಅಧ್ಯಕ್ಷರ ವಿಮಾನದತ್ತ ಬಂಡುಕೋರರು ಗುಂಡಿನ ದಾಳಿ ನಡೆಸಿದರೆಂದು ಮೊಗದಿಶು ಎಲ್ಮಾನ್ ಸಂಘಟನೆಯ ಉಪಾಧ್ಯಕ್ಷ ಅಲಿ ಯಾಸಿನ್ ಗೆಡಿ ತಿಳಿಸಿದ್ದಾರೆ. ಸೊಮಾಲಿಯಲ್ಲಿ ಹೋರಾಟದಲ್ಲಿ 19,000 ನಾಗರಿಕರು ಹತರಾಗಿದ್ದು, 1.5 ದಶಲಕ್ಷ ಜನರು ಮನೆಗಳನ್ನು ತೊರೆದಿದ್ದು ಸಂತ್ರಸ್ತರಾಗಿದ್ದಾರೆ.