ಯುಪಿಎ ನೇತೃತ್ವದ ಭಾರತ ಸರ್ಕಾರವು ಧಾರ್ಮಿಕ ಸ್ವಾತಂತ್ರ್ಯಕ್ಕೆ ಬದ್ಧವಾಗಿದ್ದರೂ ಕೆಲವು ರಾಜ್ಯಗಳು ಅದರಲ್ಲೂ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಸ್ಥಿತಿಯ ಬಗ್ಗೆ ಆತಂಕವಿದೆ ಎಂದು ಒಬಾಮ ಆಡಳಿತದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಮೊದಲ ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ಕಾರ್ಮಿಕ ವಿಭಾಗದ ಸಹಾಯಕ ಕಾರ್ಯದರ್ಶಿ ಮೈಕೆಲ್ ಎಚ್.ಪೊಸ್ನರ್, ವಿಭಿನ್ನ ಧಾರ್ಮಿಕ ನಂಬಿಕೆಗಳ ರಾಷ್ಟ್ರವಾಗಿರುವ ಭಾರದಲ್ಲಿ ಸ್ಥಳೀಯ ಮಟ್ಟದಲ್ಲಿ ಕೆಲವು ಆತಂಕಕಾರಿ ವಿಚಾರಗಳಿದ್ದರೂ ಕೇಂದ್ರದ ಯುಪಿಎ ಸರ್ಕಾರ ಧಾರ್ಮಿಕ ಸ್ವಾತಂತ್ರ್ಯ ಕಾಪಾಡುವಲ್ಲಿ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಹಿಂದು ಧಾರ್ಮಿಕ ಮುಖಂಡರೊಬ್ಬರ(ಸ್ವಾಮಿ ಲಕ್ಷ್ಮಣಾನಂದ) ಕೊಲೆಗೆ ಪ್ರತಿಯಾಗಿ 40 ಕ್ರೈಸ್ತರನ್ನು ಹತ್ಯೆ ಮಾಡಿರುವ ಉದಾಹರಣೆಯನ್ನು ನೀಡುವ ಮೂಲಕ ಕೆಲವು ರಾಜ್ಯಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮಾತ್ರ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಚುನಾವಣೆ ಪೂರ್ವದಲ್ಲಿ ಬಿಜೆಪಿ ಮುಖಂಡರು ಪ್ರಚೋದನಕಾರಿ ಭಾಷಣ ಮಾಡಿರುವುದನ್ನು ಕೂಡ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಇಸ್ಲಾಮಿಕ್ ಭಯೋತ್ಪಾದನೆಯನ್ನು ಮಣಿಸಲು ಹಿಂದು ಆತ್ಮಹತ್ಯಾ ದಳವನ್ನು ರಚಿಸಬೇಕು ಎಂಬ ಉದ್ರೇಕಕಾರಿ ಹೇಳಿಕೆ ನೀಡಿರುವ ಶಿವಸೇನೆ ವರಿಷ್ಠ ಬಾಳಾ ಠಾಕ್ರೆ ವಿರುದ್ಧ ಮಹಾರಾಷ್ಟ್ರ ಸರ್ಕಾರ ಏನೂ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.