ಸಮುದ್ರದಲ್ಲಿ ಸಾಹಸ ನಡೆಸುತ್ತಿದ್ದ 16ರ ಹರೆಯದ ಕ್ಯಾಲಿಫೋರ್ನಿಯಾದ ಬಾಲಕಿ ಕಣ್ಮರೆಯಾಗಿದ್ದು ಸಾಕಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಆದರೆ ಆಕೆ ಜೀವಂತವಾಗಿದ್ದು, ಅಪಾಯದಿಂದ ಪಾರಾಗಿರುವುದಾಗಿ ಪೋಷಕರು ತಮ್ಮ ಬ್ಲಾಗ್‌ನಲ್ಲಿ ಉಲ್ಲೇಖಿಸಿದ್ದಾರೆ.
ಕಿರಿಯ ಸಮುದ್ರ ಸಾಹಸಿಯಾಗಿರುವ ಅಬೈ ಸಂಡೆರ್‌ಲ್ಯಾಂಡ್ ಜೂನ್ 11ರ ನಂತರ ಸೆಟಲೈಟ್ ಫೋನ್ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ಪೋಷಕರು ತಿಳಿಸಿರುವುದಾಗಿ ಗ್ರೈಂಡ್ ಟಿವಿ ಡಾಟ್ ಕಾಂ ವರದಿ ತಿಳಿಸಿತ್ತು. ಅಲ್ಲದೇ ಆಕೆ ತನ್ನ ತುರ್ತು ಮಾರ್ಗದರ್ಶಕ ಬೆಳಕನ್ನು ಚಾಲನೆಯಲ್ಲಿ ಇಟ್ಟಿರುವುದಾಗಿ ಆಸ್ಟ್ರೇಲಿಯನ್ ಕರಾವಳಿ ಪಡೆ ಅಧಿಕಾರಿಗಳು ತಿಳಿಸಿದ್ದರು.
ಸಂಡೆರ್‌ಲ್ಯಾಂಡ್ ಸುಮಾರು 400ಮೈಲಿ ದೂರದಲ್ಲಿ ನೌಕಯಾನ ಮಾಡುತ್ತಿದ್ದ ಸಂದರ್ಭದಲ್ಲಿ ಭಾರೀ ಗಾತ್ರದ ಅಲೆಗಳು ಎದ್ದಿದ್ದವು. ಈ ಸಂದರ್ಭದಲ್ಲಿ ಸೆಟಲೈಟ್ ಫೋನ್ ಸಂಪರ್ಕ ಕಳೆದುಕೊಂಡ ಪರಿಣಾಮ ಆಕೆಯ ನಾಪತ್ತೆಯಾಗಿದ್ದಳು ಎಂದು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಗೊಂಡಿತ್ತು. ಈ ಎಲ್ಲಾ ಊಹಾಪೋಗಳ ನಡುವೆ ತೀವ್ರ ಶೋಧ ಕಾರ್ಯಾಚರಣೆ ನಡೆದಿದ್ದು, ಆಕೆ ಸುರಕ್ಷಿತವಾಗಿರುವುದಾಗಿ ಪೋಷಕರು ತಿಳಿಸಿದ್ದಾರೆ.
ಪ್ರಪಂಚದ ಕಿರಿಯ ಸಮುದ್ರ ಸಾಹಸಿಯಾಗಿರುವ ಸಂಡೆರ್‌ಲ್ಯಾಂಡ್ ನಾಪತ್ತೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಟ್ರೇಲಿಯಾ, ಅಮೆರಿಕ ಮತ್ತು ಫ್ರೆಂಚ್ ರಕ್ಷಣಾ ಪಡೆ ಅಧಿಕಾರಿಗಳು ಆಸ್ಟ್ರೇಲಿಯಾದಿಂದ 2ಸಾವಿರ ಮೈಲಿ ದೂರು ಇರುವ ಮಡ್ಗಾಸ್ಕರ್ ಕರಾವಳಿ ಪ್ರದೇಶಕ್ಕೆ ಬೋಟ್‌ನ್ನು ರವಾನಿಸಿ ಶೋಧ ಕಾರ್ಯಚರಣೆ ನಡೆಸಲು ಸೂಚಿಸಿದ್ದರು. ಹವಾಮಾನ ಪ್ರತಿಕೂಲವಾಗಿದ್ದರಿಂದ ಅಬೈಗೆ ತೊಂದರೆ ಉಂಟಾಗಲು ಕಾರಣವಾಗಿತ್ತು. ಆದರೆ ಆಕೆ ಸುರಕ್ಷಿತವಾಗಿರುವುದಾಗಿ ಅಧಿಕಾರಿಗಳು ತುರ್ತು ಮಾಹಿತಿ ನೀಡಿದ್ದಾರೆ.