ಭಾರತ-ಅಮೆರಿಕ ಪರಮಾಣು ಒಪ್ಪಂದದಿಂದ ಎಡಪಕ್ಷ ಮತ್ತು ಯುಪಿಎ ನಡುವೆ ಬಿಕ್ಕಟ್ಟು ಮೂಡಿರುವ ಹಿನ್ನೆಲೆಯಲ್ಲಿ ಮಧ್ಯಂತರ ಚುನಾವಣೆ ಸಂಭವಿಸುವ ಸಾಧ್ಯತೆಯನ್ನು ಕಾಂಗ್ರೆಸ್ ಬುಧವಾರ ತಳ್ಳಿಹಾಕಿದ್ದು, ಈ ಬಿಕ್ಕಟ್ಟನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳುವ ವಿಶ್ವಾಸ ಹೊಂದಿದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವಕ್ತಾರ ಮತ್ತು ದೂರಸಂಪರ್ಕ ಖಾತೆ ರಾಜ್ಯ ಸಚಿವ ಶಕೀಲ್ ಅಹ್ಮದ್ ಸುದ್ದಿಗಾರರ ಜತೆ ಮಾತನಾಡುತ್ತಾ, ಈ ವಿಷಯದ ಬಗ್ಗೆ ಭಿನ್ನಾಭಿಪ್ರಾಯ ಪರಿಹಾರಕ್ಕೆ ರಚಿತವಾದ ಸಮಿತಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪರಮಾಣು ಒಪ್ಪಂದದ ಬಿಕ್ಕಟ್ಟು ಇತ್ಯರ್ಥವಾಗುವುದೆಂದು ಆಶಯ ವ್ಯಕ್ತಪಡಿಸಿದರು.
ಮಂಗಳವಾರ ನಡೆದ ಮಾತುಕತೆ ಉತ್ತೇಜನಕಾರಿಯಾಗಿದ್ದು, ಅ.22ರಂದು ಬಿಕ್ಕಟ್ಟು ಬಗೆಹರಿಯುವುದೆಂದು ಅವರು ಆಶಾಭಾವನೆ ವ್ಯಕ್ತಪಡಿಸಿದರು.ಎಡಪಕ್ಷಗಳ ಸಕಾರಾತ್ಮಕ ಧೋರಣೆಯಿಂದ ಮಧ್ಯಂತರ ಚುನಾವಣೆ ತಪ್ಪುವುದೆಂಬ ಆಶಾಕಿರಣ ಮೂಡಿದೆ ಎಂದು ಅವರು ಹೇಳಿದರು.
ಅನೇಕ ರಾಜಕೀಯ ಪಕ್ಷಗಳು ಮಧ್ಯಂತರ ಚುನಾವಣೆಗೆ ಒಲವು ವ್ಯಕ್ತಪಡಿಸಿಲ್ಲ ಎಂದು ಹೇಳಿದ ಅವರು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹೇಳುವಂತೆ ಕಾಂಗ್ರೆಸ್‌ಗೆ ಜನರ ಮೇಲೆ ಮಧ್ಯಂತರ ಚುನಾವಣೆ ಹೇರುವುದಕ್ಕೆ ಇಷ್ಟವಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವೆ ಬಿಕ್ಕಟ್ಟು ಇತ್ಯರ್ಥಕ್ಕೆ ಸಿಪಿಎಂನ ಹಿರಿಯ ನಾಯಕ ಜ್ಯೋತಿ ಬಸು ಮುಖ್ಯಪಾತ್ರ ವಹಿಸಿದ್ದು, ಬಸು ಕಾಂಗ್ರೆಸ್‌ನಲ್ಲಿ ಕೂಡ ಅತೀ ಗೌರವ ಹೊಂದಿದ್ದಾರೆಂದು ಹೇಳಿದರು.
|