ಮುಂಬಯಿ ದಾಳಿಗೆ ಸಂಬಂಧಿಸಿದ ಭಯೋತ್ಪಾದಕರ ವಿರುದ್ಧ ಪಾಕಿಸ್ತಾನವು ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಮೃದುಧೋರಣೆ ಅನುಸರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿರುವ ಬಿಜೆಪಿ, ಪಾಕಿಸ್ತಾನದ ರಕ್ಷಣೆಗೆ ಮುಂದಾಗುತ್ತಿರುವ ಅಮೆರಿಕ ಮತ್ತು ಬ್ರಿಟನ್‌ಗಳನ್ನು ಮೆಚ್ಚಿಸುವುದಕ್ಕಾಗಿ ಕೇಂದ್ರವು ಅವರೆದುರು 'ಮೊಣಕಾಲೂರುತ್ತಿದೆ' ಎಂದು ಆರೋಪಿಸಿದೆ.ಮುಂಬಯಿ ದಾಳಿಯಲ್ಲಿ ಪಾಕಿಸ್ತಾನೀ ರಾಷ್ಟ್ರೀಯರು ಭಾಗಿಯಾಗಿಲ್ಲ ಎಂಬುದು ಖಚಿತವಾಗಿದೆ ಎಂಬ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಮಿಲಿಬಂದ್ ಹೇಳಿಕೆ ನೀಡಿದ್ದು, ಇದಕ್ಕೂ ಮೊದಲು, ಭಾರತದಲ್ಲಿರುವ ಅಮೆರಿಕ ರಾಯಭಾರಿ ಡೇವಿಡ್ ಮುಲ್ಫರ್ಡ್ ಇದೇ ರೀತಿಯ ಹೇಳಿಕೆ ನೀಡಿದ ಬಳಿಕವೂ ಭಾರತವು ತನ್ನ ಧೋರಣೆ ಸಡಿಲಗೊಳಿಸಿತ್ತು ಎಂದು ಬಿಜೆಪಿ ಆಪಾದಿಸಿದೆ.ಈ ದಾಳಿಯನ್ನು ಆಯೋಜಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಪಾಕಿಸ್ತಾನೀ ರಾಷ್ಟ್ರೀಯ ಶಕ್ತಿಗಳು ಭಾಗಿಯಾಗಿವೆ ಎಂದು ಈ ಹಿಂದೆ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರು. ಇಬ್ಬರು 'ಡೇವಿಡ್'ಗಳ ಕಳವಳಕಾರಿ ಹೇಳಿಕೆಯು ಭಾರತದ ನಿಲುವಿಗೆ ಮರ್ಮಾಘಾತ ನೀಡಿದೆ ಎಂದು ಬಿಜೆಪಿ ಹೇಳಿದೆ. ಮಿಲಿಬಂದ್ ಹೇಳಿಕೆಯನ್ನು ಖಂಡಿಸಲು ಕೇಂದ್ರದ ವೈಫಲ್ಯವು, 'ನಮಗೆ ಭಾರತ ಯಾವುದೇ ಸಾಕ್ಷ್ಯಾಧಾರ ನೀಡಿಲ್ಲ' ಎಂಬ ಪಾಕ್ ಪ್ರಧಾನಿ ಗಿಲಾನಿ ಹೇಳಿಕೆಗೆ ಪುಷ್ಟಿ ನೀಡುವಂತಿದೆ ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ಆರೋಪಿಸಿದ್ದಾರೆ.ಇದಕ್ಕೂ ಕಳವಳಕಾರಿ ಸಂಗತಿಯೆಂದರೆ, ಮುಂಬಯಿ ದಾಳಿಗಳಿಗೆ ಸಂಬಂಧಿಸಿದ ಉಗ್ರರ ವಿಚಾರಣೆ ಪಾಕಿಸ್ತಾನದಲ್ಲೇ ನಡೆಯಲಿದೆ ಎಂಬ ನೆರೆರಾಷ್ಟ್ರದ ಹೇಳಿಕೆಗೆ ನಮ್ಮ ವಿದೇಶಾಂಗ ಸಚಿವರು ಒಪ್ಪಿದ್ದಾರೆ. ಈ ಕಾರಣಕ್ಕೆ, ಸರಕಾರವು ಈ ಸಂಪೂರ್ಣ ಯು-ಟರ್ನ್ ಬಗ್ಗೆ ಜನತೆಗೆ ವಿವರಣೆ ನೀಡಬೇಕು ಎಂದು ಅವರು ಒತ್ತಾಯಿಸಿದರು. |