ರೈಲಿನ ಛಾವಣಿಯ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ ಮೂವರು ಪ್ರಯಾಣಿಕರು ಉರುಳಿ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ಪ್ರತಾಪಗಢ್ ಸಮೀಪದಲ್ಲಿ ಚಲಿಸುತ್ತಿದ್ದ ಸರಯೂ ಎಕ್ಸ್‌ಪ್ರೆಸ್‌ನಲ್ಲಿ ಸಂಭವಿಸಿದೆ. ಈ ದುರಂತದ ವೇಳೆ ಇತರ 35 ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಇಲ್ಲಿಂದ 80 ದೂರದ ಚಿಲ್ಬಿಯಾ ಎಂಬಲ್ಲಿ ರೈಲುಸಾಗುತ್ತಿದ್ದಾಗ, ಛಾವಣಿ ಮೇಲೆ ಕುಳಿತವರಿಗೆ ಮರದ ಗೆಲ್ಲು ಬಡಿದ ಕಾರಣ ಈ ದುರ್ದೈವಿಗಳು ಉರುಳಿ ಬಿದ್ದಿದ್ದಾರೆ ಎಂದು ಸ್ಟೇಶನ್ ಮಾಸ್ಟರ್ ಅಭಿಮನ್ಯು ಧಾರ್ ದ್ವಿವೇದಿ ಹೇಳಿದ್ದಾರೆ.
ಅಲಹಾಬಾದ್‌ನಿಂದ ಫೈಜಾಬಾದ್ ನಡುವೆ ಓಡಾಡುವ ರೈಲಿನ ಮೇಲೆ ಸುಮಾರು 200 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಫೈಜಾಬಾದಿನಲ್ಲಿ ನಡೆಯುತ್ತಿದ್ದ ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇವರು ಪ್ರಯಾಣಿಸುತ್ತಿದ್ದರು. ಜನದಟ್ಟಣೆಯಿಂದ ಗಿಜಿಗುಟ್ಟುತ್ತಿದ್ದ ರೈಲಿನ ಬೋಗಿಗಳಲ್ಲಿ ಜಾಗವಿಲ್ಲದ ಕಾರಣ ಅವರೆಲ್ಲ ಛಾವಣಿ ಮೇಲೆ ಕುಳಿತಿದ್ದರು.
ಗಾಯಾಳುಗಳನ್ನು ಲಕ್ನೋ, ಅಲಹಾಬಾದ್ ಹಾಗೂ ಪ್ರತಾಪಗಢ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. |