ಚೆನ್ನೈನ ಕೆಲವು ಖಾಸಗೀ ವೈದ್ಯಕೀಯ ಕಾಲೇಜುಗಳು ಎಂಬಿಬಿಎಸ್ ಸೀಟುಗಳಿಗೆ 12ರಿಂದ 40 ಲಕ್ಷ ರೂಪಾಯಿಗಳ ಬೇಡಿಕೆ ಇಡುತ್ತವೆ ಎಂಬ ಅಂಶ ಬಯಲಿಗೆ ಬಂದಿರುವ ಬೆನ್ನಿಗೆ ಸ್ನಾತಕೋತ್ತರ ಸೀಟುಗಳು ಎರಡು ಕೋಟಿ ರೂಪಾಯಿಗಳಿಗೆ ಮಾರಲ್ಪಡುತ್ತವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಬರಿಯ ಎಂಬಿಬಿಎಸ್ ಮಾಡಿದರೆ ಸಾಲದು, ಯಶಸ್ವೀ ಭವಿಷ್ಯಕ್ಕೆ ಸ್ನಾತಕೋತ್ತರ ಪದವಿ ಅವಶ್ಯವಾಗಿದ್ದು ವೈದ್ಯಕೀಯ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗೆ ಮುಗಿಬೀಳುವ ಕಾರಣ ಈ ಸೀಟುಗಳ ರೇಟುಗಳು ಭಯಂಕರವಾಗಿದೆ. ರಾಷ್ಟ್ರಾದ್ಯಂತ ಖಾಸಗಿ ಕಾಲೇಜುಗಳಲ್ಲಿ ಈ ವರ್ಷ ರೇಡಿಯಾಲಜಿ ವಿಭಾಗಕ್ಕೆ ಎರಡು ಕೋಟಿಯಾದರೆ, ಕಾರ್ಡಿಯಾಲಜಿ, ಗೈನಕಾಲಜಿ ಹಾಗೂ ಆರ್ಥೋಪೆಡಿಕ್ ಸೀಟುಗಳಿಗೆ ಸುಮಾರು ಒಂದೂವರೆ ಕೋಟಿ ರೂಪಾಯಿ ನೀಡಬೇಕು ಎಂದು ವರದಿ ಹೇಳಿದೆ.
ಸ್ನಾತಕೋತ್ತರ ಪದವಿಗಳಿಗೆ ಸೀಟುಗಳ ಕೊರತೆಯೇ ಈ ಮಟ್ಟದಲ್ಲಿ ರೇಟು ಏರಲು ಮುಖ್ಯಕಾರಣ. ಎಂಬಿಬಿಎಸ್ ಮತ್ತು ಸ್ನಾತಕೋತ್ತರ ಪದವೀಧರರಿಗಿರುವ ಸರಾಸರಿ 100:29. ಹಾಗಾಗಿ ರಾಷ್ಟ್ರಾದ್ಯಂತ ಕಾಲೇಜುಗಳಲ್ಲಿ ಸುಮಾರು 32,000 ಸಾವಿರ ವಿದ್ಯಾರ್ಥಿಗಳು ಪ್ರತಿವರ್ಷ ವೈದ್ಯಕೀಯ ಪದವಿ ಪಡೆದರೆ ಇವರಲ್ಲಿ ಮೂರನೆ ಒಂದು ಭಾಗದಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಲಭಿಸುವ ಕಾರಣ ಈ ಸೀಟುಗಳ ರೇಟು ಈ ಮಟ್ಟದಲ್ಲಿ ಏರಲು ಕಾರಣ ಎಂದು ವಿಶ್ಲೇಷಿಸಲಾಗಿದೆ.
ಭಾರತದಾದ್ಯಂತ ಕಾರ್ಡಿಯಾಲಜಿ, ರೇಡಿಯಾಲಜಿ, ಆರ್ಥೋಪೆಡಿಕ್ಸ್ ಮತ್ತು ಗೈನಾಕಾಲಜಿಸ್ಟ್ ವಿಭಾಗದಲ್ಲಿ ಕ್ಲಿನಿಕಲ್ ಕೋರ್ಸ್‌ಗಳಿಗೆ 9,085 ಸೀಟುಗಳಿವೆ. ಪ್ರೀ ಕ್ಲಿನಿಕಲ್ ಕೋರ್ಸ್‌ಗಳಿಗೆ ಅಂದರೆ ಅನಾಟಮಿ, ಫಿಸಿಯಾಲಜಿಗಳಿಗೆ 662 ಸೀಟುಗಳಿವೆ. ಪೆಥಾಲಜಿ, ಮೈಕ್ರೋ ಬಯಾಲಜಿ ಮತ್ತು ಫಾರೆನ್ಸಿಕ್ ಮೆಡಿಸಿನ್‌ನಂತಹ ಅರೆ-ಕ್ಲಿನಿಕಲ್ ಕೋರ್ಸ್‌ಗಳಿಗೆ 1,303 ಸೀಟುಗಳಿವೆ. ಇವುಗಳಲ್ಲಿ ದೊಡ್ಡ ಪಾಲು ಖಾಸಗೀ ಕಾಲೇಜುಗಳದ್ದಾಗಿರುವ ಕಾರಣ ಅವುಗಳು ಮನಬಂದಂತೆ ದೊಡ್ಡ ಮೊತ್ತದ ಡೋನೇಶನ್ ವಸೂಲಿ ಮಾಡುತ್ತಿದೆ. ಇದರಿಂದಾಗಿ ಪ್ರತಿಭಾವಂತ ಬಡವಿದ್ಯಾರ್ಥಿಗಳು ಇಷ್ಟು ದೊಡ್ಡ ಮೊತ್ತವನ್ನು ಹೊಂದಿಸಲಾಗದೆ ಕೈ ಚೆಲ್ಲಬೇಕಾಗುತ್ತದೆ. |