ಎಸ್‌ಎನ್‌ಸಿ ಲ್ಯಾವಲಿನ್ ಹಗರಣಕ್ಕೆ ಸಂಬಂಧಿಸಿದಂತೆ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಎಂ)ನ ರಾಜ್ಯ ಕಾರ್ಯದರ್ಶಿ ಪಿಣರಾಯಿ ವಿಜಯನ್ ಅವರನ್ನು ತನಿಖೆಗೆ ಒಳಪಡಿಸುವಂತೆ ಕೇರಳ ರಾಜ್ಯಪಾಲರು ಆರ್.ಎಸ್.ಗವಾಯಿ ಸಿಬಿಐಗೆ ಭಾನುವಾರ ಗ್ರೀನ್ ಸಿಗ್ನಲ್ ನೀಡಿರುವ ಬಗ್ಗೆ ಸಿಪಿಐ(ಎಂ) ಕಿಡಿಕಾರಿದೆ.
ಪಿಣರಾಯ್ ವಿರುದ್ಧ ತನಿಖೆ ನಡೆಸಲು ಸಾಕಷ್ಟು ಪುರಾವೆಗಳಿಲ್ಲ, ರಾಜ್ಯಪಾಲರು ತನಿಖೆಗೆ ಆದೇಶ ನೀಡಬಾರದೆಂದು ಸಿಪಿಎಂ-ಎಲ್‌ಡಿಎಫ್ ನೇತೃತ್ವದ ಸರ್ಕಾರ ಶಿಫಾರಸು ಮಾಡಿತ್ತು. ಆದರೂ ರಾಜ್ಯಪಾಲರು ರಾಜಕೀಯ ಪ್ರೇರಿತವಾಗಿ ಪಿಣರಾಯ ವಿರುದ್ಧ ತನಿಖೆಗೆ ಆದೇಶ ನೀಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಪಿಣರಾಯ ತನಿಖೆಗೆ ರಾಜ್ಯಪಾಲರು ಆದೇಶ ನೀಡಿರುವುದು ನಿಜಕ್ಕೂ ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಿಪಿಐಎಂ, ಇದು ರಾಜಕೀಯ ಪ್ರೇರಿತವಾದದ್ದು ಎಂದು ಹೇಳಿದೆ.
1997ರಲ್ಲಿ ಪಿಣರಾಯಿ ವಿಜಯನ್ ರಾಜ್ಯ ವಿದ್ಯುತ್‌ಚ್ಛಕ್ತಿ ಸಚಿವರಾಗಿದ್ದ ವೇಳೆ ಎರಡು ವಿದ್ಯುತ್‌ಚ್ಛಕ್ತಿ ಕೇಂದ್ರಗಳನ್ನು ಸ್ಥಾಪಿಸಲು ಕೆನಡಾ ಮೂಲದ ಎಸ್‌ಎನ್‌ಸಿ ಲ್ಯಾವಲಿನ್ ಕಂಪೆನಿಯೊಂದಿಗೆ ಅಕ್ರಮವಾಗಿ ಒಪ್ಪಂದ ಮಾಡಿಕೊಂಡಿದ್ದರು. ರಾಜ್ಯಪಾಲರ ಈ ತೀರ್ಮಾನ ಸ್ವಾಗತಿಸಿದ ವಿರೋಧ ಪಕ್ಷದ ನಾಯಕರಾದ ರಮೇಶ್ ಚೆನ್ನಿತಲ ಮತ್ತು ಉಮ್ಮನ್ ಚಾಂಡಿ ಇದು ನ್ಯಾಯಯುತವಾದ ತೀರ್ಮಾನ ಎಂದು ತಿಳಿಸಿದ್ದರು.
ಲ್ಯಾವಲಿನ್ ಹಗರಣ ಕೇರಳ ರಾಜಕಾರಣದಲ್ಲಿ ಸಾಕಷ್ಟು ವಿವಾದ ಹುಟ್ಟು ಹಾಕಿತ್ತು. ಅಲ್ಲದೇ ಅವರನ್ನು ಪಕ್ಷದಿಂದ ವಜಾಗೊಳಿಸುವಂತೆಯೂ ಒತ್ತಡ ಹೇರಲಾಗಿತ್ತಾದರೂ ಪಾಲಿಟ್ ಬ್ಯೂರೋ ಕಠಿಣ ನಿರ್ಧಾರ ಕೈಗೊಳ್ಳದೆ ನುಣುಚಿಕೊಂಡಿತ್ತು. ಕೇರಳದ ಸಿಪಿಎಂ-ಎಲ್‌ಡಿಎಫ್ ನೇತೃತ್ವದ ಸರ್ಕಾರ ಕೂಡ ವಿಜಯನ್ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರ ಇಲ್ಲದ ಕಾರಣ ತನಿಖೆ ನಡೆಸಲು ಆದೇಶ ನೀಡಬಾರದು ಎಂಬ ಶಿಫಾರಸಿನ ನಡುವೆಯೂ ರಾಜ್ಯಪಾಲರ ಈ ಆದೇಶ ಹೊರಬಿದ್ದಿರುವುದು ಕೇರಳ ರಾಜಕೀಯದಲ್ಲಿ ಮತ್ತೊಂದು ವಿವಾದ ಹುಟ್ಟುಹಾಕಿದೆ. |