ರಾಜಕಾರಣದಲ್ಲಿ ಪ್ರಬಲ ರಾಜಕಾರಣಿಯಾಗಲು ಮುಖ್ಯವಾಗಿ ಬೇಕಾಗಿರುವ ನಾಯಕತ್ವ, ಆಡಳಿತ ಹಾಗೂ ಅಂತಾರಾಷ್ಟ್ರೀಯ ಸಂಬಂಧ...ಹೀಗೆ ಹಲವಾರು ಅಂಶಗಳ ಬಗ್ಗೆ ಭಾರತದ ಸಂಸದರು ತರಬೇತಿ ಪಡೆಯುವ ಸಲುವಾಗಿ ಜೂನ್ ತಿಂಗಳಾಂತ್ಯದಲ್ಲಿ ಅಮೆರಿಕದ ಯಾಲೆ ಯೂನಿರ್ವಸಿಟಿಗೆ ತೆರಳಲಿದ್ದಾರೆ, ಅದರಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರೂ ಸೇರಿದ್ದಾರೆ.ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ಅವರ ನೇತೃತ್ವದ ಸಂಸದರ ತಂಡವೊಂದು ತಿಂಗಳಾಂತ್ಯದಲ್ಲಿ ಯಾಲೆ ಯೂನಿರ್ವಸಿಟಿಯಲ್ಲಿ ನಾಯಕತ್ವದ ಕುರಿತಂತೆ ಕೆಲವೊಂದು ತರಬೇತಿ ಪಡೆಯಲು ಹೊರಡಲು ಸಜ್ಜಾಗಿದೆ. ಭಾರತ ಹಾಗೂ ಯಾಲೆ ಯೂನಿರ್ವಸಿಟಿ ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದು, ಜೂನ್ 21 ರಿಂದ 26ರವರೆಗೆ ಸಂಸದರಿಗಾಗಿ ತರಬೇತಿ ನಡೆಯಲಿದೆ.ತರಬೇತಿ ಪಡೆಯುವ ತಂಡದಲ್ಲಿ ಪ್ರಮುಖರಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಚಂದ್ರಶೇಖರ್ ಪುತ್ರ, ಹಾಲಿ ಸಂಸದ ನೀರಜ್ ಶೇಖರ್, ಬಿಜೆಪಿ ವಕ್ತಾರ ಪ್ರಕಾಶ್ ಜಾವೇದ್ಕರ್, ಹಿಮಾಚಲ ಪ್ರದೇಶದ ಸಂಸದ ಅನುರಾಗ್ ಸಿಂಗ್ ಠಾಕೂರ್, ಪ್ರಿಯಾ ದತ್, ಶ್ರುತಿ ಚೌಧುರಿ, ಮೊಹಮ್ಮದ್ ಹಮುದ್ದುಲ್ಲಾ ಸಯೀದ್ ಸೇರಿದಂತೆ ಹಲವು ಸಂಸದರು ಸೇರಿದ್ದಾರೆ.ಯುವ ಮುಖಂಡರಿಗೆ ವಿವಿಧ ವಿಭಾಗಗಳಲ್ಲಿ ಹಾಗೂ ಹೊಸತನದ ಕುರಿತು ಹೆಚ್ಚಿನ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ 2007ರಲ್ಲಿ ಭಾರತ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ(ಎಫ್‌ಐಸಿಸಿಐ), ಭಾರತ ಮತ್ತು ಅಮೆರಿಕ ಸಂಸದೀಯ ಮಂಡಳಿ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲು ಆರಂಭಿಸಿತ್ತು. ಕಾರ್ಯಕ್ರಮದಲ್ಲಿ ಯಾಲೆ ಯೂನಿರ್ವಸಿಟಿಯಲ್ಲಿನ ಪಂಡಿತರಿಂದ ಉಪನ್ಯಾಸ, ಚರ್ಚೆ ಹಾಗೂ ಖಾಸಗಿ ಚರ್ಚೆಗಳನ್ನು ನಡೆಸುವ ಮೂಲಕ ಭಾರತದ ಯುವ ಸಂಸದರಿಗೆ ತರಬೇತಿ ನೀಡಲಾಗುತ್ತದೆ. |