ಪಕ್ಷದ ಚುನಾವಣೆ ಪ್ರಚಾರವನ್ನು ಕಳಪೆಯಾಗಿ ನಿರ್ವಹಿಸಿದವರ ವಿರುದ್ಧ ಬಹಿರಂಗ ಟೀಕೆ ಮಾಡಿದ ಜಸ್ವಂತ್ ಸಿಂಗ್ ವಿರುದ್ಧ ಪಕ್ಷದಲ್ಲಿ ಯಾವುದೇ ಕ್ರಮ ಕೈಗೊಳ್ಳುವ ಪ್ರಸ್ತಾಪವಾಗಿಲ್ಲ ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಢಿ ಸ್ಪಷ್ಟಪಡಿಸಿದ್ದಾರೆ.
ಜಸ್ವಂತ್ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ಪ್ರಸ್ತಾವನೆ ಇಲ್ಲದಿರುವುದರಿಂದ ಯಾವುದೇ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ. ಕೆಲವು ಮುಖಂಡರ ವಿರುದ್ಧ ಜಸ್ವಂತ್ ಹೇಳಿಕೆಗಳನ್ನು ಆರೋಪಗಳು ಎಂದು ಭಾವಿಸುವುದು ಸರಿಯಲ್ಲ. ಜಸ್ವಂತ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಮಾಧ್ಯಮದ ಹೇಳಿಕೆ ತಪ್ಪು ಎಂದು ರೂಢಿ ಹೇಳಿದರು. ಸಿಂಗ್ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದು ಪಕ್ಷವು ಅವುಗಳನ್ನು ಪರಿಗಣಿಸುವುದು.
ಆದಾಗ್ಯೂ, ಆಂತರಿಕ ವಿಚಾರಗಳನ್ನು ಮಾಧ್ಯಮದಲ್ಲಿ ಅಥವಾ ಬಹಿರಂಗವಾಗಿ ಚರ್ಚಿಸಬಾರದು ಎಂದು ರೂಢಿ ಹೇಳಿದರು.ಬಿಜೆಪಿಯ ವರ್ಚಸ್ಸಿಗೆ ಈ ವಿಚಾರ ಹಾನಿ ಉಂಟುಮಾಡಿದೆಯೇ ಎಂದು ಪ್ರಶ್ನಿಸಿದಾಗ ಪಕ್ಷದ ನಾಯಕತ್ವ ಈ ವಿಷಯ ಕುರಿತು ಗಮನಹರಿಸಿದೆ ಎಂದು ಹೇಳಿದರು.ಜಸ್ವಂತ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಒತ್ತಡದಲ್ಲಿದ್ದ ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್, ಹಿರಿಯ ನಾಯಕ ಆಡ್ವಾಣಿ ಜತೆ ಈ ವಿಷಯವಾಗಿ ಚರ್ಚೆಗೆ ತೆರಳಿದ ಸ್ವಲ್ಪ ಹೊತ್ತಿನಲ್ಲೇ ರೂಢಿ ಹೇಳಿಕೆ ಹೊರಬಿದ್ದಿದೆ.
ರಾಜನಾಥ ಸಿಂಗ್ ಮತ್ತು ಆಡ್ವಾಣಿ ನಡುವೆ ಭೇಟಿ ಬಳಿಕ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಂಬ ಊಹಾಪೋಹಗಳು ದಟ್ಟವಾಗಿತ್ತು.ಜಸ್ವಂತ್ ಸಿಂಗ್ ಮತ್ತು ಅರುಣ್ ಶೌರಿ ವಿರುದ್ಧ ಕ್ರಮ ಕೈಗೊಂಡು ಪಕ್ಷದ ಸಂಸದೀಯ ಮಂಡಳಿಯಿಂದ ಕೈಬಿಡುವಂತೆ ಪಕ್ಷದ ಒಳಗಿನಿಂದಲೇ ಒತ್ತಡ ಹೆಚ್ಚಿತ್ತು. ಆಡ್ವಾಣಿ ನಿವಾಸದಲ್ಲಿ ಬುಧವಾರ ನಡೆದ ಮುಖ್ಯ ಸಮಿತಿಯ ಸಭೆಯಲ್ಲಿ ಪಕ್ಷವನ್ನು ನಡೆಸುತ್ತಿರುವ ರೀತಿಯ ಬಗ್ಗೆ ಮತ್ತು ಪ್ರತಿಪಕ್ಷದ ನಾಯಕರಾಗಿ ಅರುಣ್ ಜೇಟ್ಲಿ ಮತ್ತಿತರ ನೇಮಕಗಳನ್ನು ಕುರಿತು ಪ್ರಶ್ನಿಸಿದ್ದರು.
ಸಾಧನೆ ಮತ್ತು ಬಹುಮಾನದ ನಡುವೆ ಸಂಬಂಧವಿರಬೇಕೆಂದು ಸಭೆಯಲ್ಲಿ ಜಸ್ವಂತ್ ತಿಳಿಸಿದ್ದರೆಂದು ಹೇಳಲಾಗಿದೆ.ಸ್ವಂತ್ ಈ ಕುರಿತು ಪಕ್ಷದ ಮುಖ್ಯಸ್ಥ ರಾಜನಾಥ ಸಿಂಗ್ ಅವರಿಗೆ ಕೂಡ ಪತ್ರ ಬರೆದಿದ್ದು, ಸೋಲಿಗೆ ಕಾರಣರಾದವರಿಗೆ ಅನುಚಿತ ಬಹುಮಾನ ನೀಡಲಾಗಿದೆಯೆಂದು ರಾಜ್ಯಸಭೆಯಲ್ಲಿ ಅರುಣ್ ಜೇಟ್ಲಿ ಅವರನ್ನು ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಏರಿಸಿದ ಕ್ರಮದ ಬಗ್ಗೆ ಇಂಗಿತ ನೀಡಿದ್ದರು. |