ತನ್ನ ಕ್ಷೇತ್ರ ಪಿಲಿಭಿತ್‌ನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುವ ವೇಳೆ ಮುಸ್ಲಿಮರ ವಿರುದ್ಧ ಹಗೆನುಡಿಗಳನ್ನಾಡಿದ ಬಿಜೆಪಿ ಯುವ ನಾಯಕ ವರುಣ್ ಗಾಂಧಿ ವಿರುದ್ಧ ಪ್ರಥಮ ಬಾರಿಗೆ ಆರೆಸ್ಸೆಸ್ ಬಹಿರಂಗ ಅಸಮಾಧಾನ ಸೂಚಿಸಿದೆ. ವರುಣ್ ಹೇಳಿಕೆಯು ಹಿಂದುತ್ವದ ಮೂಲಭೂತ ತತ್ವಗಳಿಗೆ ವಿರೋಧವಾದುದು ಎಂದು ಅದು ಅಭಿಪ್ರಾಯಿಸಿದೆ.
"ಕೈ ಕತ್ತರಿಸುವುದು ಅಥವಾ ಇಂತಹ ಯಾವುದೇ ವಿಚಾರಗಳು ನಾವು ಸ್ವೀಕಾರಾರ್ಹವಲ್ಲ. ಇದು ಹಿಂದುತ್ವ ಅಲ್ಲ" ಎಂಬುದಾಗಿ ಆರೆಸ್ಸೆಸ್ ನಾಯಕ ಎಂ.ಜಿ. ವೈದ್ಯ ಹೇಳಿದ್ದಾರೆ. ಅಲ್ಲದೆ ವರುಣ್ ಗಾಂಧಿಯವರ ಈ ಭಾಷಣವು ಮುಸ್ಲಿಂ ಮತಗಳನ್ನು ಬಿಜೆಪಿಯ ವಿರುದ್ಧ ಕ್ರೋಢೀಕರಿಸಿರಬಹುದು ಎಂದು ಅವರು ಅಭಿಪ್ರಾಯಿಸಿದ್ದಾರೆ.
ಈ ಹಿಂದೆ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಭೈಯ್ಯಾಜಿ ಜೋಷಿ ಅವರು ಈ ಹಿಂದೆ ವರುಣ್ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೆ ಸಂಘದ ಮುಖವಾಣಿ ಪತ್ರಿಕೆಯಲ್ಲಿ ವರುಣ್‌ಗೆ ಬೆಂಬಲ ಸೂಚಿಸಿ ಸಂಪಾದಕೀಯಗಳನ್ನೂ ಬರೆಯಲಾಗಿತ್ತು.
ಅದಾಗ್ಯೂ, ವರುಣ್ ಅವರು ಕೂಡ ತಾನು ಅಂತಹ ಹೇಳಿಕೆಗಳನ್ನು ನೀಡಿಯೇ ಇಲ್ಲ ಎಂದು ನಿರಾಕರಿಸಿದ್ದಾರೆ" ಎಂಬುದನ್ನು ಆರೆಸ್ಸೆಸ್ ಮುಖಂಡ ನೆನಪಿಸಿದರು.
ಇದೇವೇಳೆ, ಮಂಗಳೂರು ಪಬ್ ದಾಳಿಯ ಬಳಿಕ ಕುಖ್ಯಾತಿ ಪಡೆದಿರುವ ಶ್ರಿರಾಮ ಸೇನೆ ಹಾಗೂ ಮಾಲೆಗಾಂವ್ ಸ್ಫೋಟ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಅವರುಗಳು ಹಿಂದುತ್ವವನ್ನು ನಿಜವಾದ ಅರ್ಥದಲ್ಲಿ ಪ್ರತಿನಿಧಿಸುತ್ತಿಲ್ಲ ಎಂದು ಹೇಳಿದ್ದಾರೆ.
ಆದರೆ ಚುನಾವಣಾ ಸೋಲಿನ ಬಳಿಕ ಬಿಜೆಪಿಯೊಳಗೆ ಮೂಡಿರುವ ಹಗ್ಗಜಗ್ಗಾಟದ ಕುರಿತು ಪ್ರತಿಕ್ರಿಯಿಸಲು ವೈದ್ಯ ನಿರಾಕರಿಸಿದರು.
|