ರಾಜಧಾನಿಯ ಪೊಲೀಸ್ ಠಾಣೆಯೊಂದರಲ್ಲಿ ಮಹಿಳೆಯೊಬ್ಬಳ ಮೇಲೆ ಆರಕ್ಷಕರೇ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಇಡೀ ಇಲಾಖೆಯನ್ನು ದೂಷಿಸುವುದು ನ್ಯಾಯೋಚಿತವಾದುದಲ್ಲ ಎಂದು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.ಘಟನೆ ಕುರಿತಂತೆ ನೀವು ಯಾವುದೇ ವ್ಯಕ್ತಿ ಅಥವಾ ಇಡೀ ಇಲಾಖೆ ಮೇಲೆ ಗೂಬೆ ಕೂರಿಸಬೇಡಿ ಎಂದಿರುವ ಅವರು, ನನ್ನ ಎಣಿಕೆ ಪ್ರಕಾರ ಇದು ನ್ಯಾಯೋಚಿತವಾದ ಆರೋಪವಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಟೇಶನ್ ಹೌಸ್ ಮಾಸ್ಟರ್ ಹಾಗೂ ಇತರ ನಾಲ್ವರ ವಿರುದ್ಧ ತನಿಖೆ ನಡೆಸುವಂತೆ ದೆಹಲಿ ಕಮೀಷನ್ ಆಫ್ ವುಮನ್(ಡಿಸಿಡಬ್ಲ್ಯು)ಗೆ ನಿರ್ದೇಶನ ನೀಡಲಾಗಿದೆ ಎಂದು ದೀಕ್ಷಿತ್ ಹೇಳಿದರು. ಘಟನೆಯಲ್ಲಿ ಬಲಿಪಶುವಾಗಿರುವ ಮಹಿಳೆ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿರುವ ಅವರು, ಈ ಘಟನೆಯಿಂದ ತಾವು ತುಂಬಾ ಗೊಂದಲಕ್ಕೊಳಗಾಗಿರುವುದಾಗಿ ತಿಳಿಸಿದರು. ಅಲ್ಲದೇ ನಿಜಕ್ಕೂ ಠಾಣೆಯಲ್ಲಿ ಏನು ನಡೆಯಿತು ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಸುವುದಾಗಿ ನುಡಿದರು.ನೈರುತ್ಯ ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ಸ್ಟೇಶನ್ ಹೌಸ್ ಮಾಸ್ಟರ್ ಮತ್ತು ಇತರ ನಾಲ್ವರು ತನ್ನ ಮೇಲೆ ಅತ್ಯಾಚಾರ ಎಸಗಿದರು ಎಂಬುದಾಗಿ ಮಹಿಳೆಯೊಬ್ಬಳು ದೂರು ಸಲ್ಲಿಸಿದ್ದರು. ಘಟನೆ ಕುರಿತಂತೆ ರೊಚ್ಚಿಗೆದ್ದಿರುವ ಜನತೆ ಪ್ರತಿಭಟನೆಗೆ ಇಳಿದು ಕಲ್ಲುತೂರಾಟ ನಡೆಸಿದ ಘಟನೆಯೂ ಬುಧವಾರ ನಡೆದಿತ್ತು.ಇಂದೇರ್‌ಪುರಿಯ ಕೊಳಗೇರಿಯೊಂದರ ನಿವಾಸಿಯಾಗಿರುವ ಈ ಮಹಿಳೆಯನ್ನು ತನಿಖೆಗಾಗಿ ಪೊಲೀಸ್ ಠಾಣೆಗೆ ಸೋಮವಾರ ರಾತ್ರಿ ಕರೆದೊಯ್ದಿರುವ ಪೊಲೀಸರು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ದೂರಲಾಗಿತ್ತು. ಈಕೆಯ ಪತಿ ಬೆಟ್ಟಿಂಗ್ ವ್ಯವಹಾರದಲ್ಲಿ ತೊಡಗಿದ್ದಾನೆ ಎಂದು ಹೇಳಲಾಗಿದೆ.ಈ ಸಂದರ್ಭದಲ್ಲಿ ತನ್ನಮೇಲೆ ಲೈಂಗಿಕ ಅತ್ಯಾಚಾರ ಎಸಗಲಾಯಿತು ಎಂದು ದೂರಿರುವ ಮಹಿಳೆಯು, ಒಂದೊಮ್ಮೆ ಈ ವಿಚಾರವನ್ನು ಯಾರ ಬಳಿಯಾದರೂ ಬಾಯಿಬಿಟ್ಟಲ್ಲಿ ಅದರ ಪರಿಣಾಮವನ್ನು ಎದುರಿಸಬೇಕಾದೀತು ಎಂಬುದಾಗಿ ಅತ್ಯಾಚಾರ ಎಸಗಿರುವ ಪೊಲೀಸರು ಬೆದರಿಕೆ ಹಾಕಿರುವುದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಳು. |