ಕರ್ನಾಲ್ (ಹರ್ಯಾಣ): ವಿಶ್ವದ ಎರಡನೇ ತದ್ರೂಪಿ ಎಮ್ಮೆ ಮರಿ 'ಗರಿಮಾ' ಭಾರತದಲ್ಲಿ ಜನಿಸಿದ್ದು, ಹರ್ಯಾಣದ ಕರ್ನಾಲ್‌ನಲ್ಲಿರುವ ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ (ಎನ್‌ಡಿಆರ್ಐ) ವಿಜ್ಞಾನಿಗಳ ಶ್ರಮ ಯಶಸ್ವಿಯಾಗಿದೆ.
ವಿನೂತನ ಮತ್ತು ಆಧುನಿಕ 'ಹಸ್ತ ಚಾಲಿತ ತದ್ರೂಪಿ ತಂತ್ರಜ್ಞಾನ'ವನ್ನು ಬಳಸಿ ವಿಜ್ಞಾನಿಗಳು ಈ ಸಾಧನೆ ಮಾಡಿದ್ದು, ಸಿಸೇರಿಯನ್ ಮೂಲಕ ಮರಿಯೆಮ್ಮೆಯನ್ನು ಹೊರತೆಗೆಯಲಾಯಿತು. ಜನನ ಸಮಯದಲ್ಲಿ ಮರಿಯೆಮ್ಮೆಯ ತೂಕ ಸುಮಾರು 43 ಕೆ.ಜಿ. ಇತ್ತು.
ಈ ಕ್ಲೋನಿಂಗ್ ತಂತ್ರಜ್ಞಾನವನ್ನು ಎನ್‌ಡಿಆರ್ಐ ಅಭಿವೃದ್ಧಿಪಡಿಸಿದ್ದು, ನಮಗೆ ಬೇಕಾದ ಲಿಂಗದ ಎಮ್ಮೆ ಮರಿಯನ್ನು ಪಡೆಯಬಹುದು. ಈ ತಂತ್ರಜ್ಞಾನ ಅನುಸರಿಸಿದಲ್ಲಿ ಭಾರತದಲ್ಲಿ ಹಾಲು ಉತ್ಪಾದನೆ ಹೆಚ್ಚಳವಾಗುವ ಸಾಧ್ಯತೆಗಳಿವೆ.
ಈ ಸಂಶೋಧನಾತ್ಮಕ ಸಾಧನೆಯಲ್ಲಿ ಡಾ.ಎಸ್.ಕೆ.ಸಿಂಗ್ಲಾ, ಡಾ.ಆರ್.ಎಸ್.ಮಾಣಿಕ್, ಡಾ.ಎಂ.ಎಸ್.ಚೌಹಾಣ್, ಡಾ.ಪಿ.ಪಾಲ್ಟಾ, ಡಾ.ಶಿವಪ್ರಸಾದ್, ಡಾ.ಆರ್.ಎಸ್.ಶಾ ಮತ್ತು ಡಾ.ಎ.ಜಾರ್ಜ್ ಅವರನ್ನೊಳಗೊಂಡ ವಿಜ್ಞಾನಿಗಳ ತಂಡಕ್ಕೆ ಡಾ.ಎ.ಕೆ.ಶ್ರೀವಾಸ್ತವ ನೇತೃತ್ವ ವಹಿಸಿದ್ದರು.
ಕೋಣಗಳ ಸಂಖ್ಯೆಯಲ್ಲಿ ಕೊರತೆಯನ್ನು ಮನಗಂಡ ಈ ವಿಜ್ಞಾನಿಗಳು, ಈ ಹಸ್ತಚಾಲಿತ ಕ್ಲೋನಿಂಗ್ ವಿಧಾನವು ಎಮ್ಮೆ ಮತ್ತು ಕೋಣಗಳ ಸಂಖ್ಯೆಯ ಅಂತರ ಕಡಿಮೆ ಮಾಡುವಲ್ಲಿ ನೆರವಾಗಬಹುದು ಎಂದು ಆಶಿಸಿದ್ದಾರೆ.
ವಿಶ್ವದ ಪ್ರಪ್ರಥಮ ಮರಿ ಎಮ್ಮೆ ಕೂಡ 2009ರ ಫೆಬ್ರವರಿ 6ರಂದು ಇದೇ ಎನ್‌ಡಿಆರ್ಐಯಲ್ಲೇ ಜನ್ಮ ತಳೆದಿತ್ತು. ಆದರೆ, ನ್ಯುಮೋನಿಯಾದಿಂದಾಗಿ ಅದು ಒಂದು ವಾರದೊಳಗೆ ಅಸು ನೀಗಿತ್ತು. |