ಕೋಲ್ಕತಾ/ನವದೆಹಲಿ, ಶುಕ್ರವಾರ, 23 ಅಕ್ಟೋಬರ್ 2009( 18:02 IST )
ಮಾಮೂಲಿ ತರಬೇತಿ ಪ್ರಕ್ರಿಯೆಯಲ್ಲಿ ನಿರತವಾಗಿದ್ದ ಐಎಎಫ್ ಮಿಗ್-27 ಸಮರಜೆಟ್ ವಿಮಾನವೊಂದು ಪಶ್ಚಿಮಬಂಗಾಳದ ನ್ಯೂ ಜಲ್ಪೈಗುರಿಯ ಚಹಾತೋಟದಲ್ಲಿ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ. ಈ ವರ್ಷದ ಜನವರಿಯಿಂದೀಚೆಗೆ ಇದು 9ನೇ ಐಎಎಫ್ ವಿಮಾನ ಅಪಘಾತವಾಗಿದೆ.
ಹಷೀಮಾರ ವಾಯುನೆಲೆಯಿಂದ ಎಂದಿನ ಅಭ್ಯಾಸದಲ್ಲಿ ನಿರತವಾಗಿದ್ದ ವಿಮಾನವು ವಾಯುನೆಲೆಯಿಂದ 15 ಕಿಮೀ ದೂರದ ನ್ಯೂಜಲ್ಪೈಗುರಿ ಬಳಿ ಅಪಘಾತಕ್ಕೀಡಾಯಿತು ಎಂದು ಐಎಎಫ್ ಅಧಿಕಾರಿಗಳು ಹೇಳಿದ್ದಾರೆ. ವಿಮಾನ ಅಪಘಾತಕ್ಕೀಡಾಗುವ ಮುಂಚೆ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ಗೌತಂ ವಿಮಾನದಿಂದ ಹೊರಕ್ಕೆ ಸುರಕ್ಷಿತವಾಗಿ ಪಾರಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತಕ್ಕೆ ಕಾರಣವನ್ನು ತನಿಖೆ ಮಾಡಲು ಐಎಎಫ್ ಆದೇಶ ನೀಡಿದೆ. ಈ ವರ್ಷ ಅಪಘಾತಕ್ಕೀಡಾಗುತ್ತಿರುವ ಎರಡನೇ ರಷ್ಯನ್ ಮಿಗ್-27 ವಿಮಾನವಾಗಿದ್ದು, ಮುಂಚಿನ ಅಪಘಾತವು ಜೋಧ್‌ಪುರದಲ್ಲಿ ಮೇ 15ರಂದು ಸಂಭವಿಸಿದ್ದು, ಅದರಲ್ಲಿ ಕೂಡ ಪೈಲಟ್ ಜೀವಕ್ಕೆ ಅಪಾಯವಿಲ್ಲದೇ ಪಾರಾಗಿದ್ದರು.ಐಎಎಫ್ ಇನ್ನೂ 3 ಮಿಗ್-21 ವಿಮಾನಗಳನ್ನು ಈ ವರ್ಷ ಕಳೆದುಕೊಂಡಿದೆ.ರಾಜಸ್ತಾನದ ಜೈಸಾಲ್ಮರ್‌ನಲ್ಲಿ ಏ.30ರಂದು ಎಸ್‌ಯು-30ಎಂಕೆಐ ವಿಮಾನ ಅಪಘಾತವಾಗಿದ್ದು, ಪೈಲಟ್ ವಿಂಗ್ ಕಮಾಂಡರ್ ಪಿ.ಎಸ್. ನಾರಾ ಮೃತಪಟ್ಟಿದ್ದರು.