ನಮ್ಮ ನಾಣ್ಯಗಳನ್ನು ಕದ್ದು ಬಾಂಗ್ಲಾದಲ್ಲಿ ಬ್ಲೇಡ್ ಮಾಡ್ತಿದ್ದಾರೆ
ಶಿಲ್ಲಾಂಗ್, ಶುಕ್ರವಾರ, 18 ಡಿಸೆಂಬರ್ 2009( 15:47 IST )
ಇದು ಹೊಸ ಸುದ್ದಿಯೇನೂ ಅಲ್ಲ. ಕಳೆದ ಹಲವಾರು ವರ್ಷಗಳಿಂದ ಭಾರತೀಯ ನಾಣ್ಯಗಳನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಾಟ ಮಾಡಿ ಆಭರಣ, ವಿಗ್ರಹಗಳನ್ನು ಮಾಡುತ್ತಿದ್ದವರು ಇದೀಗ ಶೇವಿಂಗ್ ಮಾಡೋ ಬ್ಲೇಡುಗಳನ್ನೂ ತಯಾರಿಸುತ್ತಿದ್ದಾರೆ.
25, 50, 1, 2 ಮತ್ತು 5 ರೂಪಾಯಿಗಳ ನಾಣ್ಯಗಳನ್ನು ಈ ರೀತಿ ಭಾರತದಿಂದ ಕದ್ದು ಬಾಂಗ್ಲಾಕ್ಕೆ ಸಾಗಿಸಲಾಗುತ್ತಿದೆ. ಪರಿಣಾಮ ಭಾರತ ಪ್ರತಿ ವರ್ಷ ನಾಲ್ಕು ಪಟ್ಟುಗಳಷ್ಟು ಹೆಚ್ಚು ನಾಣ್ಯಗಳನ್ನು ಉತ್ಪಾದಿಸುವ ಅನಿವಾರ್ಯತೆಗೆ ಬಿದ್ದಿದೆ.
PR
ಪ್ರತೀ ನಾಣ್ಯದ ಮೌಲ್ಯಕ್ಕಿಂತ ನಾಲ್ಕು ಪಟ್ಟುಗಳಷ್ಟು ಹೆಚ್ಚು ಹಣಕ್ಕೆ ಭಾರತದ ನಾಣ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ಐದು ರೂಪಾಯಿಯ ಒಂದು ನಾಣ್ಯದಿಂದ ಆರು ಬ್ಲೇಡುಗಳನ್ನು ತಯಾರಿಸಿ ಪ್ರತೀ ಬ್ಲೇಡನ್ನು ಎರಡು ರೂಪಾಯಿಗಳಂತೆ ಕಂಪನಿಗಳು ಮಾರುತ್ತಿವೆ.
ಇದೇ ಕಾರಣದಿಂದ ಭಾರತ ಈಗ ನಾಣ್ಯಗಳ ತಯಾರಿಕೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಲು ಯೋಚಿಸಿದೆ. ನಾಣ್ಯ ತಯಾರಿಕೆ ಬಳಸುವ ಲೋಹವನ್ನು ಬದಲಾಯಿಸಲಾಗುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಐದು ರೂಪಾಯಿ ನಾಣ್ಯಗಳಲ್ಲಿ ಈಗ ಬಳಸುವ ಲೋಹದ ಬದಲಿಗೆ ಬೇರೆ ಲೋಹವನ್ನು ಇನ್ನು ಮುಂದೆ ಬಳಸಲಾಗುತ್ತದೆ. ಅದನ್ನು ಕರಗಿಸಿ ಬ್ಲೇಡ್ ಅಥವಾ ಇನ್ಯಾವುದೇ ವಸ್ತುಗಳನ್ನು ತಯಾರಿಸುವುದು ಲಾಭದಾಯಕವಲ್ಲ ಎಂದು ಆರ್‌ಬಿಐ ತಿಳಿಸಿದೆ.