ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಶ್ನೋತ್ತರ; ಬಾಣ-ಬಿರುಸುಗಳಿಂದ ತಪ್ಪಿಸಿಕೊಂಡ ಪ್ರಧಾನಿ (Prime Minister | Manmohan Singh | UPA govt | 2G scam)
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹಗರಣಗಳ ಕುರಿತು ಮೌನ ಮುರಿದದ್ದೇ ಇಂದಿನ ಬ್ರೇಕಿಂಗ್ ನ್ಯೂಸ್. ಹಾಗೆಂದು ಪ್ರಧಾನಿಯವರು ಪತ್ರಕರ್ತರು ಮುಂದಿಟ್ಟ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿದ್ದಾರೆ ಎಂದು ಭಾವಿಸಬೇಕಾಗಿಲ್ಲ. ಕೆಲವು ಪ್ರಶ್ನೆಗಳಿಗೆ ಅವರು ಉತ್ತರಿಸಲು ಯತ್ನಿಸಿದರು, ಹಲವು ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ನೀಡಿದರು.

ಇದು ಇಂದು ಪ್ರಧಾನಿಯವರ ಜತೆ ವಿದ್ಯುನ್ಮಾನ ಮಾಧ್ಯಮಗಳ ಸಂಪಾದಕರು ನಡೆಸಿದ ಸಂವಾದದ ಸಾರಾಂಶ. ಸಂಪಾದಕರುಗಳಿಗೆ ನೀಡಲಾಗಿದ್ದ ಕಾಲಾವಕಾಶದಲ್ಲಿ ನಿರ್ದಿಷ್ಟ, ಪ್ರಖರ ಮತ್ತು ನೇರಾನೇರ ಪ್ರಶ್ನೆಗಳು ಬಂದಾಗ ಬಹುತೇಕ ನುಣುಚಿಕೊಂಡ ಪ್ರಧಾನಿಯವರು, ಲೋಕಾಭಿರಾಮ ಮತ್ತು ಅಂಕಿ-ಅಂಶಗಳನ್ನು ಮುಂದಿಟ್ಟರು.

ಭ್ರಷ್ಟಾಚಾರ ನಡೆದಿರುವುದು ಹೌದು ಎಂದರಾದರೂ, ಇದನ್ನು ತಡೆಯುವಲ್ಲಿ ತಾನು ವಿಫಲನಾಗಿಲ್ಲ ಎಂದು ಸಮರ್ಥಿಸಿಕೊಂಡರು. ಮತ್ತೊಂದೆಡೆ ತಾನು ತಪ್ಪು ಮಾಡಿದ್ದೇನೆ ಆದರೆ, ಮಾಧ್ಯಮಗಳು ಬಿಂಬಿಸುತ್ತಿರುವಷ್ಟು ದೊಡ್ಡ ಅಪರಾಧಿಯಲ್ಲ ಎಂದರು. ನನಗೆ ಜವಾಬ್ದಾರಿಗಳು ತಿಳಿದಿಲ್ಲ ಎಂದು ಯಾರೊಬ್ಬರೂ ದೂರಬೇಡಿ. ನಾನು ದುರ್ಬಲ, ಅಸಹಾಯಕ ಪ್ರಧಾನಿಯೆನ್ನಬೇಡಿ ಎಂದರು.
PTI

ಪ್ರಧಾನಿ ಮತ್ತು ಸಂಪಾದಕರುಗಳ ನಡುವೆ ನಡೆದ 70 ನಿಮಿಷಗಳ ಸಂವಾದದಲ್ಲಿ ಬಂದ ಪ್ರಮುಖ ಪ್ರಶ್ನೆಗಳು ಮತ್ತು ಪ್ರಧಾನಿ ನೀಡಿದ ಉತ್ತರಗಳ ಸಾರಾಂಶವನ್ನು ಇಲ್ಲಿ ನೀಡಲಾಗಿದೆ.

* ನಿಮ್ಮ ಸುತ್ತ ಭ್ರಷ್ಟರೇ ತುಂಬಿಕೊಂಡಿದ್ದಾರಲ್ಲ? ರಾಜೀನಾಮೆ ಯೋಚನೆ ಮಾಡಿದ್ದಿರಾ?
- ಯುಪಿಎ ಮೈತ್ರಿಕೂಟಕ್ಕೆ ನಮ್ಮ ಪಕ್ಷದ ನಾಯಕತ್ವವನ್ನು ನೀಡಿರುವುದು ಜನತೆ. ನಾವು ಪೂರ್ಣಗೊಳಿಸಬೇಕಾದ ಸಾಕಷ್ಟು ಕೆಲಸಗಳು ಬಾಕಿ ಉಳಿದಿವೆ. ನಾನು ಯಾವತ್ತೂ ಅರ್ಧದಲ್ಲೇ ಬಿಟ್ಟು ಬಿಡಬೇಕೆಂದು ಯೋಚಿಸಿಲ್ಲ. ನಾನು ಪೂರ್ಣಾವಧಿಯವರೆಗೆ ಇರುತ್ತೇನೆ. ಯಾವತ್ತೂ ರಾಜೀನಾಮೆಯ ಬಗ್ಗೆ ಯೋಚನೆ ಮಾಡಿಲ್ಲ.

* ಅತಿದೊಡ್ಡ ವಿಷಾದ ಮತ್ತು ಸಾಧನೆ ಯಾವುದು?
- ಜಾಗತಿಕ ಆರ್ಥಿಕ ಹಿಂಜರಿತದ ಸಂದರ್ಭದಲ್ಲೂ ಭಾರತದ ಆರ್ಥಿಕ ವ್ಯವಸ್ಥೆಯು ಸ್ಥಿರವಾಗಿ ನಿಲ್ಲುವಂತೆ ಮಾಡಿದ್ದು ನನ್ನ ಸರಕಾರದ ದೊಡ್ಡ ಸಾಧನೆ. ಅದೇ ಹೊತ್ತಿಗೆ ನಡೆದಿರುವ ಸರಣಿ ಅವ್ಯವಹಾರಗಳು, ಹಗರಣಗಳು ನನ್ನ ಅವಧಿಯ ಅತಿ ದೊಡ್ಡ ವಿಷಾದ.

* ಮುಂದಿನ ಪ್ರಧಾನಿ ಯಾರು?
- ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು ಎನ್ನುವುದನ್ನು ಈಗಲೇ ಹೇಳುವುದು ಕಷ್ಟ. ನಮ್ಮದು ಪ್ರಜಾಪ್ರಭುತ್ವ ಹೊಂದಿರುವ ಪಕ್ಷ. ಹಾಗಾಗಿ ಸಾಕಷ್ಟು ಆಂತರಿಕ ಸಮಾಲೋಚನೆಗಳು ನಡೆಯುವ ಅಗತ್ಯವಿದೆ. ಪಕ್ಷ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ.

* ಮುಂದಿನ ಸಂಸತ್ ಅಧಿವೇಶನ ನಡೆಯಬಹುದೇ?
- ಬಜೆಟ್ ಅಧಿವೇಶನ ಸರಾಗವಾಗಿ ಸಾಗಬೇಕು ಎನ್ನುವುದು ನಮ್ಮ ಬಯಕೆ. ಈ ಸಂಬಂಧ ಪ್ರತಿಪಕ್ಷಗಳ ಜತೆ ಮಾತುಕತೆ ನಡೆಸಲಾಗುತ್ತಿದೆ. ಅದು ಯಶಸ್ವಿಯಾಗಿ ಅಧಿವೇಶನವು ಫಲಪ್ರದವಾಗಲಿದೆ ಎಂಬ ವಿಶ್ವಾಸ ನನ್ನಲ್ಲಿದೆ. ಕಲಾಪವನ್ನು ಯಾಕೆ ಸ್ಥಗಿತಗೊಳಿಸಲಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ.

* ಯಾಕೆ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ?
- ನಮ್ಮದು ಹಲವು ಪಕ್ಷಗಳನ್ನು ಒಳಗೊಂಡಿರುವ ಸಮ್ಮಿಶ್ರ ಸರಕಾರ. ಎಲ್ಲವೂ ನಾವು ಅಂದುಕೊಂಡಂತೆ ನಡೆಯುವುದಿಲ್ಲ. ಹಾಗೆ ಮಾಡಲು ಹೋದರೆ ಪ್ರತಿ ಆರು ತಿಂಗಳಿಗೊಮ್ಮೆ ಚುನಾವಣೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಕೆಲವೊಂದು ರಾಜಿಗಳನ್ನು ಮಾಡುವುದು ಅನಿವಾರ್ಯ. ಸಮ್ಮಿಶ್ರ ಸರಕಾರದಲ್ಲಿ ಸಮ್ಮಿಶ್ರ ರಾಜಕೀಯ ಧರ್ಮವನ್ನು ಪಾಲಿಸಬೇಕಾಗುತ್ತದೆ.

* ಮಾಧ್ಯಮಗಳ ಪಾತ್ರದ ಬಗ್ಗೆ...
- ಮಾಧ್ಯಮಗಳು ಋಣಾತ್ಮಕ ವಿಚಾರವನ್ನೇ ಎತ್ತಿ ತೋರಿಸಬಾರದು ಎನ್ನುವುದು ನನ್ನ ಕಳಕಳಿಯ ಮನವಿ. ತಪ್ಪಾಗಿರುವ ಕಡೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ನಾನು ನೀಡುತ್ತೇನೆ. ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾರ್ಯಗಳಿಗೆ ನಮ್ಮ ಜತೆ ಸಹಕರಿಸಿ.

* ಆರೋಪಗಳಿದ್ದರೂ ರಾಜಾರನ್ನು ಸಚಿವರನ್ನಾಗಿಸಿದ್ದು ಯಾಕೆ?
- ಪಾಲುದಾರ ಪಕ್ಷಗಳ ಆಯ್ಕೆ ನಾವು ಹೇಳಿದಂತೆ ನಡೆಯಬೇಕು ಎಂದು ಹೇಳಲು ಸಾಧ್ಯವಿಲ್ಲ. ಅದು ಆ ಪಕ್ಷದ ನಾಯಕತ್ವಕ್ಕೆ ಸಂಬಂಧಪಟ್ಟ ವಿಚಾರವಾಗಿರುತ್ತದೆ ಮತ್ತು ಅವರ ನಿರ್ಧಾರವನ್ನು ನಾವು ಗೌರವಿಸಬೇಕಾಗುತ್ತದೆ. ರಾಜಾ ಮತ್ತು ದಯಾನಿಧಿ ಮಾರನ್ ಅವರ ಆಯ್ಕೆ ಡಿಎಂಕೆ ಪಕ್ಷದ್ದು. ಈ ಸಂದರ್ಭದಲ್ಲಿ ರಾಜಾ ಅವರಿಂದ ಯಾವುದೇ ಗಂಭೀರ ಪ್ರಮಾದಗಳು ನಡೆದಿವೆ ಎಂದು ನನ್ನ ಗಮನಕ್ಕೆ ಬಂದಿರಲಿಲ್ಲ.

* ಪ್ರತಿಪಕ್ಷಗಳು ಜೆಪಿಸಿ ತನಿಖೆಗೆ ಒತ್ತಾಯಿಸುತ್ತಿವೆ, ನೀವ್ಯಾಕೆ ಹಿಂಜರಿಯುತ್ತಿದ್ದೀರಿ?
- ನಾನು ಜೆಪಿಸಿ ಸೇರಿದಂತೆ ಯಾವುದೇ ತನಿಖೆಗೂ ಹೆದರುತ್ತಿಲ್ಲ. ಪಿಎಸಿ ಸಮಿತಿಯ ಮುಂದೆ ಹಾಜರಾಗಲು ಕೂಡ ನಾನು ಸಿದ್ಧನಿದ್ದೇನೆ. ಬಿಜೆಪಿ ಮತ್ತು ಎಡಪಕ್ಷಗಳು ಸೇರಿದಂತೆ ಪ್ರತಿಪಕ್ಷಗಳು ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿವೆ. ಸರಕಾರದ ಆರ್ಥಿಕ ನೀತಿಗಳ ವಿರುದ್ಧ ಬಿಜೆಪಿ ಹಗೆತನವನ್ನು ಮುಂದುವರಿಸಿದೆ. ಗುಜರಾತಿನ ಓರ್ವ ವ್ಯಕ್ತಿಯ ಮೇಲಿನ (ಸಿಬಿಐ ವಶದಲ್ಲಿರುವ ಮಾಜಿ ಸಚಿವ ಅಮಿತ್ ಶಾ ಬಗ್ಗೆ) ಮಾತುಗಳನ್ನು ಕೇಂದ್ರ ಬದಲಿಸಬೇಕು ಎಂದು ಬಿಜೆಪಿ ಬಯಸುತ್ತಿದೆ.
ಇವನ್ನೂ ಓದಿ