ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ: ಚಿದಂಬರಂ ವಿರುದ್ಧ ತನಿಖೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌ಗೆ ಸಿಬಿಐ (Subramanian Swamy | P Chidambaram | 2G scam |CBI | Supreme Court | Central government | A Raja)
2ಜಿ: ಚಿದಂಬರಂ ವಿರುದ್ಧ ತನಿಖೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌ಗೆ ಸಿಬಿಐ
ನವದೆಹಲಿ, ಮಂಗಳವಾರ, 27 ಸೆಪ್ಟೆಂಬರ್ 2011( 17:42 IST )
PTI
2ಜಿ ತರಂಗ ಗುಚ್ಚ ಹಗರಣದ ದರ ನಿಗದಿ ಪ್ರಕರಣದಲ್ಲಿ ಕೇಂದ್ರ ಸಚಿವ ಪಿ.ಚಿದಂಬರಂ ಪಾತ್ರದ ಬಗ್ಗೆ ತನಿಖೆ ನಡೆಸುವುದಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಸಿಬಿಐ ಸ್ಪಷ್ಟಪಡಿಸಿದೆ
ಕಳೆದ 2008ರಲ್ಲಿ ವಿತ್ತಸಚಿವರಾಗಿದ್ದ ಪಿ.ಚಿದಂಬರಂ 2ಜಿ ತರಂಗ ಗುಚ್ಚ ದರ ನಿಗದಿಯಲ್ಲಿ ಪಾಲ್ಗೊಂಡಿದ್ದರಿಂದ ಅವರ ವಿರುದ್ಧ ಸಿಬಿಐ ತನಿಖೆಯಾಗಬೇಕು ಎಂದು ಜನತಾಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯಂ ಸ್ವಾಮಿ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯ ವಿಚಾರಣೆ ಆರಂಭಿಸಿದಾಗ, ಸಿಬಿಐ ಪರ ವಕೀಲರು ವಾದ ಮಂಡಿಸಿ, 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯನ್ನು ಮುಕ್ತಾಯಗೊಳಿಸಿದ್ದರಿಂದ, ಇದೀಗ, ಚಿದಂಬರಂ ವಿರುದ್ಧದ ತನಿಖೆ ಆರಂಭಿಸುವುದು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದೆ.
ನ್ಯಾಯಾಲಯದಲ್ಲಿ ಸುಬ್ರಹ್ಮಣ್ಯಂ ಸಲ್ಲಿಸಿದ ದಾಖಲೆಗಳನ್ನು ಪಡೆದುಕೊಂಡು ಕೇಂದ್ರ ಗೃಹಸಚಿವ ಪಿ.ಚಿದಂಬರಂ ವಿರುದ್ಧ ಸಿಬಿಐ ತನಿಖೆಯನ್ನು ಹೊಸತಾಗಿ ಆರಂಭಿಸಬಹುದು ಎಂದು ಕೇಂದ್ರ ಸರಕಾರದ ಪರ ವಕೀಲರು ನ್ಯಾಯಾಲಯದ ಮುಂದೆ ವಾದಿಸಿದರು.
ಕೇಂದ್ರ ಸರಕಾರದ ಪರ ವಕೀಲರ ವಾದಕ್ಕೆ ವಿರೋಧ ವ್ಯಕ್ತಪಡಿಸಿದ ಸಿಬಿಐ ಪರ ವಕೀಲರು, ಸಿಬಿಐ ಸ್ವಾಯತ್ತತೆಯನ್ನು ಹೊಂದಿರುವ ಸಂಸ್ಥೆಯಾಗಿದ್ದರಿಂದ, ತನಿಖೆ ಮಾಡುವಂತೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಆಸಕ್ತಿಕರ ವಿಷಯವೆಂದರೆ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಯು-ಟರ್ನ್ ತೆಗೆದುಕೊಂಡು ಚಿದಂಬರಂ ವಿರುದ್ಧ ಸಿಬಿಐ ತನಿಖೆ ಬೇಡ. ತನಿಖೆಯಿಂದ ಪ್ರಕರಣ ವಿಳಂಬವಾಗಲಿದೆ ಎಂದು ನ್ಯಾಯಾಲಯಕ್ಕೆ ಕೋರಿದರು.
ಆದರೆ, ನ್ಯಾಯಾಲಯದಲ್ಲಿ ನಿನ್ನೆ ನಡೆದ ವಿಚಾರಣೆ ಸಂದರ್ಭದಲ್ಲಿ ಚಿದಂಬರಂ ಸೇರಿದಂತೆ ಸಂಪೂರ್ಣ ಸಚಿವ ಸಂಪುಟದ ವಿರುದ್ಧ ತನಿಖೆ ನಡೆಯಬೇಕು ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.