ತಮ್ಮ ಹುಟ್ಟಿನಿಂದಲೇ ಹೃದಯ ಸಂಬಂಧಿತ ಕಾಯಿಲೆಗೆ ಒಳಗಾಗಿರುವ ಸುಮಾರು 40 ಬಡ ಮಕ್ಕಳಿಗೆ ರೋಟರಿ ಅಂತಾರಾಷ್ಟ್ರೀಯ ಮತ್ತು ಮಣಿಪಾಲ ಆಸ್ಪತ್ರೆಯ ಹೃದಯ ಚಿಕಿತ್ಸಾ ವಿಭಾಗದ ಜಂಟಿ ಸಹಕಾರದೊಂದಿಗೆ ಮಣಿಪಾಲ ಆಸ್ಪತ್ರೆಯು ಚಿಕಿತ್ಸೆ ನೀಡುತ್ತಿದ್ದು, ಈವೆರಗೆ ಸುಮಾರು 16 ಮಕ್ಕಳು ಈ ಚಿಕಿತ್ಸಾ ಸೌಲಭ್ಯವನ್ನು ಪಡೆದುಕೊಂಡು ನವಜೀವನವನ್ನು ಪಡೆದುಕೊಂಡಿದ್ದಾರೆ.
ಹೃದಯ ಸಂಬಂಧಿ ರೋಗಗಳನ್ನು ಹೊಂದಿರುವ ಅನೇಕ ಸವಲತ್ತು ವಂಚಿತ ಮಕ್ಕಳಿಗೆ ಚಿಕಿತ್ಸೆ ನೀಡುವಲ್ಲಿ ಮಣಿಪಾಲ ಆಸ್ಪತ್ರೆಯ ಈ ಯೋಜನೆಯು ಅತ್ಯಂತ ಮಹತ್ವದ ಪಾತ್ರವನ್ನು ಪಡೆದುಕೊಂಡಿದ್ದು, ಹೃದ್ರೋಗಪೀಡಿತ ಮಕ್ಕಳ ಹೆತ್ತವರ ಕುಟುಂಬದಲ್ಲಿ ಬೆಳಕನ್ನು ಮೂಡಿಸಿದೆ.
ಹಲವು ಬಾರಿ ಜ್ವರದಿಂದ ಬಳಲುತ್ತಿದ್ದ ಯಾವತ್ತೂ ನಿರುತ್ಸಾಹದಿಂದಿರುತ್ತಿದ್ದ ಮಂಗಳೂರು ಮೂಲದ ಏಳು ವರ್ಷ ಪ್ರಾಯದ ಮಿಥುನ್, ಮಣಿಪಾಲ ಆಸ್ಪತ್ರೆಯ ಚಿಕಿತ್ಸೆಯ ಫಲವಾಗಿ ಈಗ ಎಲ್ಲರಂತೆ ಚಟುವಟಿಕೆಯಿಂದಿದ್ದಾನೆ. ಅದೇ ರೀತಿ, ಯಾವಾಗಲೂ ಅನಾರೋಗ್ಯದಿಂದಿರುತ್ತಿದ್ದ, ಜೊತೆಗೆ ಕಿವುಡು ಸಮಸ್ಯೆಯನ್ನೂ ಹೊಂದಿದ್ದ ಸೇಲಂನ ಎರಡು ವರ್ಷ ಪ್ರಾಯದ ಜಯಪ್ರತಾಪ್ , ಮಣಿಪಾಲ ಆಸ್ಪತ್ರೆಯ ತಜ್ಞರ ಫಲವಾಗಿ ಇಂದು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾನೆ.
ಶಿವಮೊಗ್ಗ ರೈತ ಕುಟುಂಬಕ್ಕೆ ಸೇರಿದ ಹತ್ತು ವರ್ಷ ಪ್ರಾಯದ ಮಂಜೇಶ, ಹುಟ್ಟಿನಿಂದಲೇ ಹೃದ್ರೋಗ ಕಾಯಿಲೆಯನ್ನು ಹೊಂದಿದ್ದ ಮಂಡ್ಯದ ಹೇಮಂತ್, ಐದು ವರ್ಷ ಪ್ರಾಯದ ಮಹಮ್ಮದ್ ಶಹೀದ್ ಈ ಮಕ್ಕಳಿಗೂ ಯಶಸ್ವೀ ಶಸ್ತ್ರಚಿಕಿತ್ಸೆಯನ್ನು ನಡೆಸುವುದರೊಂದಿಗೆ ಮಣಿಪಾಲ ಆಸ್ಪತ್ರೆಯು ಮುಗ್ದ ಮಕ್ಕಳ ಬಾಳನ್ನು ಬೆಳಗಿಸಿದ ಹಿರಿಮೆಗೆ ಪಾತ್ರವಾಗಿದೆ.
ಶಸ್ತ್ರಚಿಕಿತ್ಸೆಯ ವಿವರಗಳನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಈ ಯೋಜನೆಯ ರೂವಾರಿ ಒ.ಪಿ.ಖನ್ನಾ, ಮಣಿಪಾಲ ಆಸ್ಪತ್ರೆಯ ಯಶಸ್ವೀ ಶಸ್ತ್ರಚಿಕಿತ್ಸೆಯಿಂದ ಅನೇಕ ಹೃದ್ರೋಗ ಪೀಡಿತ ಮಕ್ಕಳು ಆರೋಗ್ಯದಿಂದ ನಲಿದಾಡುತ್ತಿರುವುದ ಸಂತಸ ತಂದಿದೆ, ಅಲ್ಲದೆ, ಮಣಿಪಾಲ ಆಸ್ಪತ್ರೆಯ ಈ ಮ್ಯಾಚಿಂಗ್ ಗ್ರ್ಯಾಂಟ್ ಯೋಜನೆಯಿಂದ 40 ಮಕ್ಕಳಿಗೆ ಸಹಾಯವಾಗುತ್ತದೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಮತ್ತು ಹೃದ್ರೋಗ ಪೀಡಿತ ಬಡಮಕ್ಕಳಲ್ಲಿ ಹೊಸಜೀವನ ಮೂಡಿಸಿದ ತೃಪ್ತಿ ಇದೆ ಎಂದು ತಿಳಿಸಿದ್ದಾರೆ.
ಪ್ರತಿವರ್ಷ ಭಾರತದಲ್ಲಿ 1,50,000 ಮಕ್ಕಳು ಹುಟ್ಟುವಾಗಲೇ ಹೃದಯ ಖಾಯಿಲೆಗೆ ಒಳಗಾಗುತ್ತಾರೆ. ದುಃಖದ ವಿಚಾರವೆಂದರೆ ಅವರಲ್ಲಿ ಕೇವಲ 5,000 ಮಕ್ಕಳು ಮಾತ್ರವೇ ಖಾಸಗಿ ಅಥವಾ ಸಹಕಾರಿ ವಲಯಗಳ ಸಹಕಾರದಿಂದ ಚಿಕಿತ್ಸೆ ಪಡೆಯುತ್ತಾರೆ ಎಂದು ಇದೇ ವೇಳೆ ಉಪಸ್ಥಿತರಿದ್ದ ಮಣಿಪಾಲ ಆಸ್ಪತ್ರೆಯ ಹೃದಯ ತಜ್ಞ ಡಾ.ಪ್ರಸಾದ್ ಕೃಷ್ಣನ್ ಹೇಳುತ್ತಾರೆ.
|