ಬಳ್ಳಾರಿ ಅರಣ್ಯ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಯುತ್ತಿದ್ದರೆ ಕೂಡಲೇ ಅದನ್ನು ಮುಚ್ಚಿಸುವೆ. ಇದರಲ್ಲಿ ಯಾವ ರಾಜಿಯೂ ಇಲ್ಲ ಎಂದು ಅರಣ್ಯ ಪರಿಸರ ಖಾತೆ ರಾಜ್ಯ ಸಚಿವ ಜೈರಾಮ್ ರಮೇಶ್ ಗುಡುಗಿದ್ದಾರೆ.
ಬುಧವಾರ ನಗರಕ್ಕೆ ಆಗಮಿಸಿದ್ದ ಅವರು ಅರಣ್ಯ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರಣ್ಯದಲ್ಲಿ ಗಣಿಗಾರಿಕೆ ನಡೆಸುವಂತಿಲ್ಲ. ಇದನ್ನು ಉಲ್ಲಂಘನೆ ಮಾಡುವುದನ್ನು ಕೇಂದ್ರ ಸಹಿಸುವುದಿಲ್ಲ. ರಾಜ್ಯ ಸರ್ಕಾರಗಳು ಅಭಿವೃದ್ಧಿ ಯೋದನೆ ಹೆಸರಲ್ಲಿ ನಿರಾಕ್ಷೇಪಣಾ ಪತ್ರ(ಎನ್‌ಓಸಿ) ಹಿಡಿದು ಬಂದರೂ ಕೇಂದ್ರ ಅದನ್ನು ಒಪ್ಪುವುದಿಲ್ಲ. ಗಣಿಗಾರಿಕೆಗೂ ಇದೇ ಉತ್ತರ ಎಂದು ಹೇಳಿದರು.
ಬಳ್ಳಾರಿ ಅಥವಾ ರಾಜ್ಯದ ಇನ್ನಾವುದೇ ಪ್ರದೇಶದ ಅರಣ್ಯ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಿದರೆ ತಕ್ಷಣ ವರದಿ ತರಿಸಿ ಅದನ್ನು ಕೇಂದ್ರ ನಿಲ್ಲಿಸಲಿದೆ ಎಂದರು. ಅರಣ್ಯ ಪ್ರದೇಶದಲ್ಲಿ ರೈಲ್ವೆ, ರಸ್ತೆ ಇತರೆ ಯಾವುದೇ ಅಭಿವೃದ್ಧಿ ಕಾರ್ಯವನ್ನು ಕೇಂದ್ರ ಒಪ್ಪುವುದಿಲ್ಲ, ಬೇಕಿದ್ದರೆ ಯೋಜನೆಗಳ ಮಾರ್ಗವನ್ನೇ ಬದಲಿಸಿಕೊಳ್ಳಲಿ ಎಂದು ತಿಳಿಸಿದ ರಮೇಶ್, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಕಂಪನಿಗಳು ಅರಣ್ಯ ನೀತಿಯನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತಿವೆ ಎಂದು ದೂರಿದರು.
ಅರಣ್ಯ ಕಾಯ್ದೆಗೆ ತಿದ್ದುಪಡಿ ತರುವ ಅಥವಾ ಕಾಯ್ದೆಗಳನ್ನು ಸರಳಗೊಳಿಸುವ ಯಾವುದೇ ಪ್ರಸ್ತಾಪ ನಮ್ಮ ಮುಂದೆ ಇಲ್ಲ ಮತ್ತು ಅದು ಸಾಧ್ಯವೂ ಇಲ್ಲ ಎಂದು ಅವರು 1980ರ ಅರಣ್ಯ ಕಾಯ್ದೆ ರೂಪಿಸುವ ಮುನ್ನ ಪ್ರತಿ ವರ್ಷ ಒಂದೂವರೆ ಲಕ್ಷ ಹೆಕ್ಟೇರ್ ಅರಣ್ಯ ಭೂಮಿ ಕಳೆದುಕೊಳ್ಳಲಾಗುತ್ತಿತ್ತು. ಆದರೆ ಪ್ರಸ್ತುತ ವಾರ್ಷಿಕ 30ಸಾವಿರ ಹೆಕ್ಟೇರ್ ಕಳೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು. |