ಪೊಲೀಸರೆಂದರೆ ಬೆಚ್ಚಿಬೀಳಬೇಕಾಗಿದ್ದ ಕಳ್ಳರ ತಂಡವೊಂದು ಪೊಲೀಸ್ ಬಡಾವಣೆಯಲ್ಲಿರುವ ಪೊಲೀಸ್ ಇನ್ಸ್‌ಪೆಕ್ಟರ್‌ರೊಬ್ಬರ ಮನೆಗೆ ಕನ್ನ ಹಾಕಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಪೊಲೀಸ್ ಬಡಾವಣೆಯಲ್ಲಿರುವ ಇನ್ಸ್‌ಪೆಕ್ಟರ್ ನಾಗಪ್ಪ ಅವರ ಮನೆಗೆ ನುಗ್ಗಿದ ಆರು ಮಂದಿ ದರೋಡೆಕೋರರ ತಂಡ ಮಂಗಳವಾರ ರಾತ್ರಿ ಮನೆಯವರನ್ನೆಲ್ಲಾ ಕೋಣೆಯೊಂದರಲ್ಲಿ ಕೂಡಿ ಹಾಕಿ ನಗ, ನಾಣ್ಯವನ್ನು ದೋಚಿಕೊಂಡು ಪರಾರಿಯಾಗಿದೆ.
ಇನ್ಸ್‌ಪೆಕ್ಟರ್ ನಾಗಪ್ಪನವರು ಮನೆಯಲ್ಲಿಲ್ಲದ ಸಂದರ್ಭ ನೋಡಿ ಮನೆಗೆ ಕನ್ನ ಹಾಕಿದ ತಂಡ, ಮನೆಯವರಿಗೆ ಪಿಸ್ತೂಲ್, ಲಾಂಗ್‌ಗಳನ್ನು ತೋರಿಸಿ, ಬೆದರಿಕೆ ಹಾಕಿ ಕೋಣೆಯೊಳಗೆ ಕೂಡಿ ಹಾಕಿದ್ದರು. ನಂತರ ಮನೆಯನ್ನೆಲ್ಲಾ ಜಾಲಾಡಿ 10ಗ್ರಾಂ ಚಿನ್ನ, ಲ್ಯಾಪ್‌ಟಾಪ್, ಹತ್ತು ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿದ್ದು ಕಳ್ಳರ ತಂಡವನ್ನು ಬಂಧಿಸಲಾಗುವುದು ಎಂದು ಡಿಸಿಪಿ ಶಿವಲಿಂಗಪ್ಪ ತಿಳಿಸಿದ್ದಾರೆ. |