ಕರ್ನಾಟಕದ ನೂತನ ರಾಜ್ಯಪಾಲರಾಗಿ ಹಂಸರಾಜ್ ಭಾರದ್ವಾಜ್ ಅವರನ್ನು ಬುಧವಾರ ಕೇಂದ್ರ ಸರ್ಕಾರ ನೇಮಕ ಮಾಡಿದ್ದು, ಹಾಲಿ ರಾಜ್ಯಪಾಲರಾಗಿದ್ದ ರಾಮೇಶ್ವರ್ ಠಾಕೂರ್ ಅವರನ್ನು ಮಧ್ಯಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ಟಿ.ಎನ್.ಚತುರ್ವೇದಿ ಅವರು ರಾಜ್ಯಪಾಲರಾಗಿ ನಿವೃತ್ತಿಹೊಂದಿ ತೆರವಾಗಿದ್ದ ಸ್ಥಾನಕ್ಕೆ ರಾಮೇಶ್ವರ್ ಠಾಕೂರ್ ಅವರನ್ನು 2007ರಲ್ಲಿ ರಾಜ್ಯದ 15ನೇ ರಾಜ್ಯಪಾಲರನ್ನಾಗಿ ಆಯ್ಕೆ ಮಾಡಲಾಗಿತ್ತು. ಜಾರ್ಖಂಡ್ ರಾಜ್ಯದವರಾದ ಠಾಕೂರ್ ಅವರು ಒರಿಸ್ಸಾ, ಆಂಧ್ರಪ್ರದೇಶಗಳಲ್ಲಿ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಮಧ್ಯಪ್ರದೇಶದ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ.
ರಾಮೇಶ್ವರ್ ಠಾಕೂರ್ ಅವರ ಸ್ಥಾನಕ್ಕೆ ಎಚ್.ಆರ್.ಭಾರದ್ವಾಜ್ ಅವರು 16ನೇ ರಾಜ್ಯಪಾಲರಾಗಿ ಆಯ್ಕೆಯಾಗಿದ್ದು, ಶೀಘ್ರವೇ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕೇಂದ್ರದ ಮೂಲಗಳು ತಿಳಿಸಿವೆ.
1937 ಮೇ 17ರಂದು ಜನಿಸಿರುವ ಹಂಸರಾಜ್ ಭಾರದ್ವಾಜ್ ಅವರು ರಾಜ್ಯ ಸಭಾ ಸದಸ್ಯರಾಗಿ, ಸಂಸದರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ 2004ರಲ್ಲಿ ಯುಪಿಎ ಸರ್ಕಾರದಲ್ಲಿ ಕಾನೂನು ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ರಾಜ್ಯಪಾಲರ ಹುದ್ದೆಯನ್ನು ಅಲಂಕರಿಸಿದ್ದಾರೆ. |