ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಪುನರುಚ್ಚರಿಸಿರುವ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಅವರು ಇನ್ನೂ 40ವರ್ಷ ಆಡಳಿತ ನಡೆಸಿದ್ರೂ ಕೂಡ ಸಹಕಾರ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಮಾಧ್ಯಮಗಳು ಮಾತ್ರ ಊಹಾಪೋಹದ ವರದಿಯನ್ನು ನೀಡುತ್ತಿವೆ ಎಂದು ದೂರಿದರು. ಯಡಿಯೂರಪ್ಪನವರು ನಮ್ಮ ಪ್ರಶ್ನಾತೀತ ನಾಯಕ, ಅವರು ರಾಜ್ಯದಲ್ಲಿ ಇನ್ನೂ 40 ವರ್ಷಗಳವರೆಗೆ ಆಡಳಿತ ನಡೆಸಿದರೂ ನಮ್ಮ ತಕರಾರಿಲ್ಲ ಎಂದರು.
ಮುಖ್ಯಮಂತ್ರಿಗಳನ್ನಾಗಲಿ, ಸರ್ಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುವ ನಿಟ್ಟಿನಲ್ಲಿ ಯಾವುದೇ ರಹಸ್ಯ ಸಭೆಯನ್ನು ನಡೆಸಿಲ್ಲ ಎಂದು ಈ ಸಂದರ್ಭದಲ್ಲಿ ಸಮಜಾಯಿಷಿ ನೀಡಿದರು.
ಗಣಿ ವಿವಾದ ಮತ್ತು ಗಡಿ ಸಮೀಕ್ಷೆ ಸಂಬಂಧಿಸಿದಂತೆ ಹಾಗೂ ಆರು ಮಂದಿ ಸಚಿವರನ್ನು ಕೈಬಿಡುವಂತೆ ಮುಖ್ಯಮಂತ್ರಿಗಳ ಮೇಲೆ ಅಸಮಾಧಾನಗೊಂಡಿದ್ದ ರೆಡ್ಡಿ ಸಹೋದರರು ತಮ್ಮ ಬೆಂಬಲಿಗರೊಂದಿಗೆ ಬಳ್ಳಾರಿ, ಬೆಂಗಳೂರಿನಲ್ಲಿ ರಹಸ್ಯ ಸಭೆ ನಡೆಸಿದ್ದರು. ಭಿನ್ನಮತ ಉಲ್ಭಣಗೊಳ್ಳುತ್ತಿರುವ ನಡುವೆಯೇ ಇತ್ತೀಚೆಗಷ್ಟೇ ನಡೆದ ಸಚಿವ ಸಂಪುಟ ಸಭೆಯಲ್ಲಿ ರೆಡ್ಡಿ ಸಹೋದರರ ಮೇಲಿನ 16 ಮೊಕದ್ದಮೆಗಳನ್ನು ವಾಪಸು ಪಡೆಯಲಾಗಿತ್ತು. ಅಲ್ಲದೇ ನಿಷ್ಠಾವಂತ ಅಧಿಕಾರಿಯಾಗಿ ಬಳ್ಳಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮದನಗೋಪಾಲ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆ ಹಿನ್ನೆಲೆಯಲ್ಲಿ ರೆಡ್ಡಿ ಸಹೋದರರು ಇದೀಗ ಮತ್ತೆ ಯಡಿಯೂರಪ್ಪನವರ ಗುಣಗಾನ ಮಾಡತೊಡಗಿದ್ದಾರೆ.! |