ರಾಜ್ಯದಲ್ಲಿ ಮಳೆಯ ಪ್ರಮಾಣ ಇಳಿಮುಖವಾಗಿರುವುದರಿಂದ ಮುಂದಿನ ದಿನಗಳಲ್ಲಿ ವಿದ್ಯುತ್ ದರ ದುಬಾರಿಯಾಗುವ ಬಗ್ಗೆ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಮುನ್ಸೂಚನೆ ನೀಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ ರಾಜ್ಯಕ್ಕೆ 105ಮಿಲಿಯನ್ ಯೂನಿಟ್ ವಿದ್ಯುತ್ ಅಗತ್ಯವಿದೆ. ಆದರೆ, ಸದ್ಯದಲ್ಲೇ 98ಮಿಲಿಯನ್ ಯೂನಿಟ್ ಮಾತ್ರ ಲಭ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ವಿದ್ಯುತ್ ದುಬಾರಿಯಾಗುವ ಸಾಧ್ಯತೆಗಳಿವೆ ಎಂದು ಸುಳಿವು ನೀಡಿದರು.
ವಿದ್ಯುತ್ ಅಭಾವ ನೀಗಿಸಲು ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಪ್ರಕೃತಿಯ ಮುನಿಸಿನಿಂದಾಗುವ ಪರಿಣಾಮಗಳನ್ನು ಎದುರಿಸಲು ಕಷ್ಟವಾಗಿದೆ. ಆದರೆ ವಿದ್ಯುತ್ ಪೂರೈಕೆಗೆ ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ತಿಳಿಸಿದರು.
ಹೆಚ್ಚಿನ ಸಮಸ್ಯೆ ಎದುರಾಗುವ ಸಾಧ್ಯತೆಗಳು ಇರುವುದರಿಂದ ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರು ಸಂಗ್ರಹ ಮಾಡಲಾಗಿದೆ ಎಂದರು. ಅಲ್ಲದೆ ಬಳ್ಳಾರಿ ಮತ್ತು ರಾಯಚೂರಿನ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಸಮರ್ಪಕ ವಿದ್ಯುತ್ ಉತ್ಪಾದನೆಗೆ ಅವಶ್ಯ ಕ್ರಮ ಕೈಗೊಂಡಿರುವುದಾಗಿ ಹೇಳಿದರು. |